ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ ಆಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ. 13ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಹೊಸ ಮತಯಂತ್ರಗಳನ್ನು ಬಳಕೆ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ಈ ಬಗ್ಗೆ ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ, ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮೂಲಕ ತಮ್ಮ ಪ್ರಶ್ನೆ ಎತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಉಪೇಂದ್ರ ಟ್ವೀಟ್: ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ? ಏಕೆಂದು ಬಲ್ಲವರು ತಿಳಿಸುತ್ತೀರಾ ? ಎಂದು ಟ್ವೀಟ್ ಮಾಡುವ ಮೂಲಕ ಚರ್ಚೆಗೆ ವೇದಿಕೆ ಸೃಷ್ಟಿಸಿದ್ದಾರೆ.
'ರಾಜಕೀಯ ಪಕ್ಷಗಳ ಹಿಂ ಬಾಲಕರು': ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಶುರುವಾದ ಬೆನ್ನಲ್ಲೇ, ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನ ಬೇಕಾ ? ನನಗೆ ಗೊತ್ತಿಲ್ಲ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ. ಅಬ್ಬಬ್ಬಾ ಏನು ಕಾಮೆಂಟ್ಸ್ಗಳು. ವಾರೆ ವಾ. ವ್ಯಾಪಾರಿ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಪ್ರಶ್ನೆ ಅಷ್ಟೇ, ಟೀಕೆ ಅಲ್ಲ..ಇದು ತಂತ್ರಜ್ಞಾನ ಯುಗ. ಅನಕ್ಷರಸ್ಥ ರಸ್ತೆ ವ್ಯಾಪಾರಿಗಳು ಫೋನ್ ಮೂಲಕ ಡಿಜಿಟಲ್ನಲ್ಲಿ ಹಣದ ವ್ಯವಹಾರ ಮಾಡುತ್ತಾರೆ. ವ್ಯಾಪಾರಸ್ಥರು ಕೋಟ್ಯಂತರ ಹಣವನ್ನು ಸುರಕ್ಷಿತವಾಗಿ ಆನ್ಲೈನ್ನಲ್ಲಿ ಟ್ರಾನ್ಸ್ಫರ್ ಮಾಡುತ್ತಾರೆ. ಬಹು ಮುಖ್ಯ ದಾಖಲೆಯೊಂದಿಗೆ ವ್ಯವಹಾರ ನಡೆಸುವ ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಕಂಪನಿಗಳು ಡಿಜಿಟಲ್ ಮೂಲಕ ವ್ಯವಹರಿಸುತ್ತಾರೆ. ಪ್ರಧಾನ ಮಂತ್ರಿಗಳು ತಮ್ಮ ಬೆರಳಿನಿಂದಲೇ ಲಕ್ಷಾಂತರ ಬ್ಯಾಂಕ್ ಖಾತೆಗೆ ಏಕಕಾಲಕ್ಕೆ ಹಣ ವರ್ಗಾಯಿಸುತ್ತಾರೆ. ಇಷ್ಟೆಲ್ಲಾ ಬದಲಾವಣೆ ಆದರೂ, ಚುನಾವಣೆಯಲ್ಲಿ ಮತದಾರರು ಅವರಿರುವ ಜಾಗದಿಂದಲೇ ಮತದಾನ ಮಾಡುವ ತಂತ್ರಜ್ಞಾನ ಏಕೆ ಬರುತ್ತಿಲ್ಲ? ಇದು ಪ್ರಶ್ನೆ ಅಷ್ಟೇ, ಟೀಕೆ ಅಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಟ್ವೀಟ್ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ.
ಇದನ್ನೂ ಓದಿ:ಮಾಡದ ಅಪರಾಧಕ್ಕೆ ನಾನೇಕೆ ನರಳಬೇಕು?: ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ
ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಮುಹೂರ್ತ ನಿಗದಿ ಆಗಿದೆ. ಚುನಾವಣಾ ದಿನಾಂಕ ಇಂದು ಘೋಷಣೆಯಾಗಿದೆ. ಮೇ 10 ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ:ಒಟಿಟಿಗೆ ಬರ್ತಿದೆ 'ಕಬ್ಜ': ಸಿನಿಮಾ ಪ್ರೇಮಿಗಳಲ್ಲಿ ಹೆಚ್ಚಿದ ಕುತೂಹಲ