ಚಂಡೀಗಢ (ಪಂಜಾಬ್):ವಿಶ್ವ ಸುಂದರಿ ಹರ್ನಾಜ್ ಕೌರ್ ಸಂಧು ತಮ್ಮ ಚೊಚ್ಚಲ ಪಂಜಾಬಿ ಸಿನೆಮಾದಲ್ಲೇ ವಿವಾದವನ್ನು ಆಹ್ವಾನಿಸಿದ್ದಾರೆ. ಒಪ್ಪಂದದ ಪ್ರಕಾರ, ಚಿತ್ರದ ಪ್ರಚಾರಕ್ಕೆ ಸಹಕರಿಸದ ಇವರ ವಿರುದ್ಧ ಪಂಜಾಬ್ ನಟಿ ಉಪಾಸನಾ ಸಿಂಗ್ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದೇ ವೇಳೆ ಗಂಭೀರ ಆರೋಪ ಮಾಡಿರುವ ಉಪಾಸನಾ ಸಿಂಗ್, ತಮ್ಮ ವಕೀಲರಾದ ಕರಣ್ ಸಚ್‌ದೇವ ಮತ್ತು ಇರ್ವಿನೀತ್ ಕೌರ್ ಮೂಲಕ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮುಖೇನ ಹರ್ನಾಜ್ ಕೌರ್ ತಮ್ಮ ಮೊದಲ ಚಿತ್ರದಲ್ಲೇ ಕಾನೂನು ಸಮರ ಎದುರಿಸಬೇಕಾದ ಪ್ರಸಂಗ ಎದುರಾಗಿದೆ.
ಆಗಸ್ಟ್ 19 ರಂದು ಬಿಡುಗಡೆಯಾಗಲಿರುವ ಪಂಜಾಬಿ ಚಿತ್ರ 'ಬೈ ಜಿ ಕುಟ್ಟಾಂಗೇ' (Bai Ji Kuttange) ಚಿತ್ರದಲ್ಲಿ ಹರ್ನಾಜ್ ಕೌರ್ ಸಂಧು ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಒಪ್ಪಂದದಂತೆ ಪ್ರಚಾರದಲ್ಲಿ ಅವರು ತೊಡಗಬೇಕಿತ್ತು. ಆದರೆ ಅವರು ಪ್ರಚಾರದಲ್ಲಿ ಭಾಗವಹಿಸಿಲ್ಲ ಎಂದು ಉಪಾಸನಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಚಿತ್ರೀಕರಣಕ್ಕೂ ಮುನ್ನ (2020) ಹರ್ನಾಜ್ ಕೌರ್ ಸಂಧು ಅವರು 'ಸಂತೋಷ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋ' ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರದಲ್ಲಿ ಕಂಪನಿಯ ಕಾನೂನು ಪ್ರಕಾರ ನಡೆದುಕೊಳ್ಳುವುದಾಗಿ ಒಪ್ಪಿಗೆ ಸೂಚಿಸಿದ್ದರು. ಅದರ ಪ್ರಕಾರ ಹರ್ನಾಜ್ ಚಿತ್ರದ ಪ್ರಚಾರ ಚಟುವಟಿಕೆಗಾಗಿ ಕೆಲವು ದಿನಗಳನ್ನು ನೀಡಬೇಕಾಗಿತ್ತು. ಆದರೆ, ಈ ನಿಯಮ ಮುರಿದಿದ್ದಾರೆ ಎನ್ನುವುದು ಸಿಂಗ್ ಆರೋಪ.
ಇತ್ತೀಚೆಗಷ್ಟೇ ಕೌರ್ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಆದರೆ, ಅದಕ್ಕೂ ಮುನ್ನವೇ ನಮ್ಮ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ, ವಿಶ್ವ ಸುಂದರಿ ಕಿರೀಟ ಧರಿಸಿದ ಬಳಿಕ ಇದ್ದಕ್ಕಿದ್ದಂತೆ ಅವರ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಚಿತ್ರದ ಬಗೆಗಿನ ಜವಾಬ್ದಾರಿಗಳನ್ನೂ ಮರೆತಿದ್ದಾರೆ. ಚಿತ್ರದ ಬಿಡುಗಡೆಯ ದಿನಾಂಕ ಮೊದಲು 27-05-2022 ಆಗಿತ್ತು. ಪ್ರಚಾರಕ್ಕಾಗಿ ಅವರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಈ ದಿನಾಂಕವನ್ನು 19-08 2022 ಕ್ಕೆ ಬದಲಾಯಿಸಲಾಗಿದೆ. ಆದರೂ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಉಪಾಸನಾ ಸಿಂಗ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.