ಬೆಂಗಳೂರು:ನಟ ತಾರಕರತ್ನ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎಂಆರ್ಐ ಮತ್ತು ಸಿಟಿ ಸ್ಕ್ಯಾನ್ ಬಳಿಕ ತಾರಕರತ್ನ ಅವರ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಸೋಮವಾರ ಮಧ್ಯಾಹ್ನದ ನಂತರ ತಾರಕರತ್ನ ಆರೋಗ್ಯ ಸ್ಥಿತಿ ಕುರಿತು ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ.
ಹೆಚ್ಚುವರಿ ಪಡೆ ನಿಯೋಜನೆಗೆ ಆದೇಶ: ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಅಭಿಮಾನಿಗಳು ಮತ್ತು ಸಂದರ್ಶಕರ ನಡುವೆ ಘರ್ಷಣೆ ಹೆಚ್ಚುತ್ತಿರುವ ಕಾರಣ ಹೆಚ್ಚುವರಿ ಪಡೆಗಳನ್ನು ನಿಯೋಜಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸಚಿವ ಸುಧಾಕರ್ ಹೇಳಿದ್ದ ಹೀಗೆ: ಕುಪ್ಪಂನಲ್ಲಿ ಆಂಜಿಯೋಪ್ಲಾಸ್ಟಿ ನಂತರ ನಾರಾಯಣ ಹೃದಯಾಲಯದ ವೈದ್ಯರ ತಂಡ ನಟ ತಾರಕರತ್ನ ಅವರಿಗೆ ಚಿಕಿತ್ಸೆ ಮುಂದುವರೆಸಿದೆ. ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಭಾನುವಾರ ತಾರಕರತ್ನ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಅವರ ಹೃದಯ ಬಡಿತ ಸಾಮಾನ್ಯವಾಗಿದೆ, ಆದರೆ, ಅವರ ಮೆದುಳಿನ ಕಾರ್ಯವು ಸರಿಯಾಗಿಲ್ಲ. ಹೃದಯಾಘಾತವಾದ ನಂತರ 30 ನಿಮಿಷಗಳ ಕಾಲ ರಕ್ತ ಸಂಚಾರ ಸ್ಥಗಿತಗೊಂಡಿದ್ದರಿಂದ ಮೆದುಳಿನ ಕಾರ್ಯಚಟುವಟಿಕೆಗೆ ತೊಂದರೆಯಾಗಿರುವುದು ಪರೀಕ್ಷೆಗಳ ಮೂಲಕ ಪತ್ತೆಯಾಗಿದೆ ಎಂದರು.
ತಾರಕರತ್ನ ಆರೋಗ್ಯ ಮೇಲೆ ನಿಮ್ಹಾನ್ಸ್ ವೈದ್ಯರ ನಿಗಾ: ನಿಮ್ಹಾನ್ಸ್ ನರಶಸ್ತ್ರಚಿಕಿತ್ಸಕ ಪ್ರಾಧ್ಯಾಪಕ ಗಿರೀಶ್ ಕುಲಕರ್ಣಿ ನೇತೃತ್ವದಲ್ಲಿ ಇಬ್ಬರು ತಜ್ಞ ವೈದ್ಯರು ತಾರಕರತ್ನ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಪ್ರಸ್ತುತ ನಾರಾಯಣ ಹೃದಯಾಲಯ ಮತ್ತು ನಿಮ್ಹಾನ್ಸ್‌ನ 10 ವೈದ್ಯರು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.