ರಾಷ್ಟ್ರೀಯ ಪ್ರಶಸ್ತಿ ವಿಜೇತ, ಸೌತ್ ಸಿನಿಮಾ ಸೂಪರ್ ಸ್ಟಾರ್ ಸೂರ್ಯ ಅವರು ಇತ್ತೀಚೆಗೆ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದಾರೆ. ಸಚಿನ್ ಅವರೊಂದಿಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ನಟ ಸೂರ್ಯ. ಅಭಿಮಾನಿಗಳು ಈ ಫೋಟೋಗೆ ಭಾರೀ ಮೆಚ್ಚುಗೆ ಸೂಚಿಸುತ್ತಿದ್ದು, ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
'ಪ್ರೀತಿ ಮತ್ತು ಗೌರವ': ಸಚಿನ್ ತೆಂಡೂಲ್ಕರ್ ಜೊತೆಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟ ಸೂರ್ಯ, 'ಪ್ರೀತಿ ಮತ್ತು ಗೌರವ' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇಂದು (ಗುರುವಾರ, ಫೆಬ್ರವರಿ 16 -2023) ಬೆಳಗ್ಗೆ ಸೂರ್ಯ ಅವರು ಸಚಿನ್ ಜೊತೆಗಿನ ಚಿತ್ರ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ವಿವಿಧ ಕ್ಷೇತ್ರಗಳ ಇಬ್ಬರು ಸಾಧಕರು, ಅತ್ಯಂತ ಪ್ರೀತಿಪಾತ್ರ ಭಾರತೀಯ ತಾರೆಯರನ್ನು ಒಂದೇ ಫ್ರೇಮ್ನಲ್ಲಿ ನೋಡಿದ ನೆಟ್ಟಿಗರು ಅಪರೂಪದ ಕ್ಷಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು..ಸೂರ್ಯ ಅವರ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, 'ಒಂದು ಫ್ರೇಮ್ನಲ್ಲಿ ಇಬ್ಬರು ದಂತಕಥೆ' ಎಂದು ಬರೆದಿದ್ದಾರೆ. ಇನ್ನೋರ್ವ ಅಭಿಮಾನಿ, 'ಸಿಂಗಮ್ ಮತ್ತು ಮಾಸ್ಟರ್ = ಫೈರ್' ಎಂದು ಬರೆದಿದ್ದಾರೆ. ಇದೇ ವೇಳೆ ಮತ್ತೊಬ್ಬ ಅಭಿಮಾನಿ ಇಬ್ಬರು ಲೆಜೆಂಡ್ಸ್ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕ್ರಿಕೆಟ್ ದೇವರು ಮತ್ತು ಭಾರತೀಯ ಚಿತ್ರರಂಗದ ಹೆಮ್ಮೆ ಎಂದು ಸಹ ತಿಳಿಸಿದ್ದಾರೆ.
ನಟ ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಸುಮಾರು 4 ತಿಂಗಳ ನಂತರ ಅವರು ಈ ಹೊಸ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಕ್ರಿಕೆಟ್ ದಂತಕಥೆಯೊಂದಿಗೆ ಫೋಟೋ ಶೇರ್ ಮಾಡಿದ್ದು, ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣರಾಗಿದ್ದಾರೆ. ಅವರ ಹೊಸ ಪೋಸ್ಟ್ ನೋಡಿದ ಅಭಿಮಾನಿಯೊಬ್ಬರು, 'ಸುಮಾರು 4 ತಿಂಗಳ ನಂತರ ನಿಮ್ಮ ಪೋಸ್ಟ್ ಬಂದಿದೆ, ಬಹಳ ಸಂತೋಷ' ಎಂದು ಕಾಮೆಂಟ್ ಮಾಡಿದ್ದಾರೆ.