ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಕನ್ನಡ ನಟ ಎಂದರೆ ಅದು ಅಭಿನಯ ಚಕ್ರವರ್ತಿ ಸುದೀಪ್. ಅವರು ಕೇವಲ ತೆರೆ ಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ರಿಯಲ್ ಹೀರೋ ಅಂತಾರೆ ಅಭಿಮಾನಿಗಳು. ಕಷ್ಟದಲ್ಲಿದ್ದವರಿಗೆ ಜೊತೆಯಾಗಿ ನಿಲ್ಲುವ ಕಿಚ್ಚನ ಹೃದಯವಂತಿಕೆಗೆ, ಸರಳತೆಗೆ ಅಭಿಮಾನಿಗಳು ಸದಾ ಮೆಚ್ಚುಗೆ ಸೂಚಿಸುತ್ತಾರೆ. ಮೆಚ್ಚಿನ ನಟನನ್ನು ಒಮ್ಮೆಯಾದರೂ ಭೇಟಿಯಾಗಬೇಕು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂಬ ಆಸೆ ಅಭಿಮಾನಿಗಳಲ್ಲಿರೋದು ಸಹಜ. ಇದೀಗ ಕಿಚ್ಚ ಸುದೀಪ್ ತಮ್ಮ ಪುಟ್ಟ, ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಪುಟ್ಟ ಅಭಿಮಾನಿ ಭೇಟಿಯಾದ ಸುದೀಪ್: ಹೌದು, ಕ್ಯಾನ್ಸರ್ನಿಂದ ಬಳಲುತ್ತಿರುವ ಕಲಬುರಗಿ ಮೂಲದ ದಂಪತಿಯ ಪುತ್ರಿಯನ್ನು ನಟ ಸುದೀಪ್ ಭೇಟಿಯಾಗಿದ್ದಾರೆ. ಈ ಪುಟ್ಟ ಬಾಲಕಿಯು ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿ. ಜೀವನದಲ್ಲಿ ಒಮ್ಮೆಯಾದರೂ ತಮ್ಮ ಮೆಚ್ಚಿನ ಸ್ಟಾರ್ ಸುದೀಪ್ ಅವರನ್ನು ಭೇಟಿಯಾಗಬೇಕು ಎಂಬುದು ಈ ಬಾಲಕಿಯ ಆಸೆಯಾಗಿತ್ತು. ಬಾಲಕಿಯ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ಅವರು ಅಭಿಮಾನಿ ಹಾಗೂ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ.
ಬಾಲಕಿಗೆ ಆಟೋಗ್ರಾಫ್, ಅಪ್ಪುಗೆ ನೀಡಿದ ಕಿಚ್ಚ: ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಆಟೋಗ್ರಾಫ್ ನೀಡಿ ಪ್ರೀತಿಯಿಂದ ಅಭಿಮಾನಿಗೆ ಅಪ್ಪುಗೆ ಕೊಟ್ಟಿದ್ದಾರೆ. ಸುದೀಪ್ ಭೇಟಿಯಾದ ಖುಷಿ ಕ್ಷಣಗಳನ್ನು ಹಂಚಿಕೊಂಡಿರುವ ಪುಟ್ಟ ಬಾಲಕಿ, ನನಗೆ ಸುದೀಪ್ ಸರ್ ಇಷ್ಟ, ಅವರನ್ನು ಭೇಟಿಯಾಗಿ ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಸುದೀಪ್ ಅವರನ್ನು ನೋಡಿ ಆ ಪುಟ್ಟ ಅಭಿಮಾನಿಯ ಖುಷಿಗೆ ಪಾರವೇ ಇರಲಿಲ್ಲ. ಕಿಚ್ಚನ ಈ ಹೃದಯವಂತಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸಲಾಂ ಎಂದಿದ್ದಾರೆ.