ಬೆಂಗಳೂರು :ನಿರ್ಮಾಪಕ ಎನ್. ಕುಮಾರ್ ಆರೋಪಕ್ಕೆ ಪ್ರತಿಯಾಗಿ ನಟ ಕಿಚ್ಚ ಸುದೀಪ್ ಕ್ರಿಮಿನಲ್ ಡಿಫಾಮೇಷನ್ (ಮಾನನಷ್ಟ) ಮೊಕದ್ದಮೆ ಹೂಡಿದ್ದಾರೆ. ಈ ಹಿಂದೆ ನೋಟಿಸ್ ಕಳುಹಿಸಿದ್ದ ಸುದೀಪ್, ಇಂದು ಮಧ್ಯಾಹ್ನ ನಗರದ ಕಾರ್ಪೊರೇಷನ್ ಬಳಿ ಇರುವ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದು, ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತನ್ನ ಜೊತೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದ ಸುದೀಪ್ ಮುಂಗಡ ಹಣ ಪಡೆದು ಬಳಿಕ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಇತ್ತೀಚೆಗೆ ನಿರ್ಮಾಪಕ ಎನ್. ಕುಮಾರ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು.
ನಟ ಸುದೀಪ್ ಹೇಳಿದ್ದಿಷ್ಟು:ನ್ಯಾಯಾಲಯದಿಂದ ಹೊರಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಟ ಸುದೀಪ್, ನಾನು ಕಲಾವಿದನಾಗಬೇಕು ಎಂದುಕೊಂಡವನು. ಎಲ್ಲರ ಕಷ್ಟ ಪರಿಹರಿಸುವ ಚಾರಿಟೇಬಲ್ ಟ್ರಸ್ಟ್ ತೆರೆದವನಲ್ಲ. ಒಬ್ಬರ ತಪ್ಪು ಆರೋಪದಿಂದ ನಾನು ಇಲ್ಲಿ ಬಂದಿದ್ದೇನೆ, ಪುನಃ ಬರಬೇಕಾಗಿ ಬಂದಲ್ಲಿ ಬರುತ್ತೇನೆ. ಆದರೆ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಬಾಯಿ ಇದೆ ಎಂದು ಹೇಗೆ ಬೇಕು ಹಾಗೆ ಮಾತನಾಡಬಾರದು. ಕಾಲಿದೆ ಎಂದು ಓಡುತ್ತಾ ಇರಬಾರದು, ಕೈಯಿದೆ ಎಂದು ಕೊಡುತ್ತಲೇ ಇರಬಾರದು. ನಾನು ಕಷ್ಟ ಪಟ್ಟಿದ್ದೇನೆ. ಭಗವಂತ ಇಷ್ಟು ಜನರ ಪ್ರೀತಿ ನೀಡಿದ್ದಾನೆ. ಈ ಸ್ಥಾನದಲ್ಲಿರಿಸಿದ್ದಾನೆ ಎಂದರೆ ನಾನು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಅರ್ಥ ಎಂದು ತಿಳಿಸಿದರು.
ನ್ಯಾಯಾಲಯದಿಂದ ಉತ್ತರ ಸಿಗುತ್ತದೆ:'ಯಾರು ಏನೇ ಆರೋಪ ಮಾಡಿದರೂ ಸಹ ಕೋರ್ಟ್ ನಿಂದ ಸರಿಯಾದ ಉತ್ತರ ಸಿಗುತ್ತದೆ. ಯಾವುದೇ ಸುಳ್ಳಿರಲಿ, ಸತ್ಯವಿರಲಿ ಬಹಿರಂಗವಾಗಿ ಹೊರ ಬರಲೇಬೇಕು. ಎಲ್ಲಿ ಇತ್ಯರ್ಥ ಆಗಬೇಕು ಅಲ್ಲಿ ಇತ್ಯರ್ಥ ಆಗುತ್ತದೆ. ಅದಕ್ಕಾಗಿಯೇ ನಾನು ನ್ಯಾಯಾಲಯದ ಮುಂದೆ ಬಂದಿದ್ದೇನೆ. ಎಲ್ಲರ ಆರೋಪಕ್ಕೆ ನಾನು ಉತ್ತರ ಕೊಡಲ್ಲ. ನಾನೇ ಒಂದು ಪತ್ರಿಕಾಗೋಷ್ಠಿ ಮಾಡಿದ್ರೆ ಅವರಿಗೂ ನನಗೂ ಏನು ವ್ಯತ್ಯಾಸ ಇರುತ್ತದೆ? ಜಾಕ್ ಮಂಜು ಏನ್ ಉತ್ತರ ಕೊಡಬೇಕಿತ್ತು ಅದನ್ನು ಕೊಟ್ಟಿದ್ದಾರೆ' ಎಂದು ಸುದೀಪ್ ತಿಳಿಸಿದರು.