ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಜನ ಸಾಮಾನ್ಯರು ಮಾತ್ರವಲ್ಲದೇ ಪ್ಯಾನ್ ಇಂಡಿಯಾ ನಟ ಪ್ರಭಾಸ್, ರಕ್ಷಿತ್ ಶೆಟ್ಟಿ, ರಮ್ಯಾ ಸೇರಿ ಹಲವು ಸೆಲೆಬ್ರಿಟಿಗಳು ಸಹ ಚಿತ್ರವನ್ನು ನೊಡಿ ಕೊಂಡಾಡಿದ್ದಾರೆ. ಈಗ ನಟ ಸುದೀಪ್ ಚಿತ್ರ ನೋಡಿರುವುದಷ್ಟೇ ಅಲ್ಲ ಅದನ್ನು ಮೆಚ್ಚಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರವನ್ನೇ ಬರೆದಿದ್ದಾರೆ.
ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ, ಕೆಲವು ಅದ್ಭುತವಾಗಿರುತ್ತವೆ. ಬಹಳ ಅಪರೂಪಕ್ಕೆ ಕೆಲವು ಚಿತ್ರಗಳನ್ನು ನೋಡಿ ನಮ್ಮ ಬಾಯಿಂದ ಮಾತೇ ಹೊರಡದಂತೆ ಆಗುತ್ತವೆ. ನಮ್ಮನ್ನು ಆ ಚಿತ್ರಗಳು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಕಾಂತಾರ ಅಂಥದ್ದೊಂದು ಚಿತ್ರ. ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ.
ಇನ್ನು, ರಿಷಬ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸನ್ನು ತಟ್ಟುತ್ತಾರೆ. ಚಿತ್ರ ನೋಡಿ ನನಗನಿಸಿದ್ದು ಎಂದರೆ, ಇಂಥದ್ದೊಂದು ಚಿತ್ರ ಹೇಗೆ ಸಾಧ್ಯವಾಯಿತು ಎಂದು. ಕಾಗದದ ಮೇಲೆ ನೋಡಿದಾಗ, ಇದನ್ನು ಓದಿದಾಗ, ಏನೂ ವಿಶೇಷ ಅಂಥನಿಸದಿರಬಹುದು. ಆದರೆ, ಅಂತಿಮವಾಗಿ ತೆರೆಯ ಮೇಲೆ ಮೂಡಿ ಬಂದಿರುವ ರೀತಿ ಇದೆಯಲ್ಲ, ಅದು ಒಬ್ಬ ನಿರ್ದೇಶಕನ ವಿಷನ್ ಎಂದರೆ ತಪ್ಪಿಲ್ಲ.