ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಬಘೀರ ಚಿತ್ರದ ಶೂಟಿಂಗ್‌ನಲ್ಲಿ ಅವಘಡವೊಂದು ಸಂಭವಿಸಿದೆ. ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಮಾಡುವಾಗ ಶ್ರೀಮುರಳಿ ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ರಾಕ್‌ಲೈನ್ ಸ್ಟುಡಿಯೋದಲ್ಲಿ ಬಘೀರ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಟನ ಕಾಲಿಗೆ ಪೆಟ್ಟಾಗಿದೆ. ಕೂಡಲೇ ಶ್ರೀಮುರಳಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಶ್ರೀಮುರಳಿ ಮೊಣಕಾಲಿಗೆ ಏಟು ಬಿದ್ದಿರುವ ಕಾರಣ ಶೀಘ್ರದಲ್ಲೇ ಸರ್ಜರಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶೂಟಿಂಗ್ ನಿಲ್ಲಿಸಲಾಗಿದೆ. ಶ್ರೀಮುರಳಿ ಆರೋಗ್ಯದ ಕುರಿತು ಅವರ ತಂದೆ ಚಿನ್ನೇಗೌಡ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ್ದು, ಹೌದು, ಸಾಹಸ ದೃಶ್ಯಗಳ ಸನ್ನಿವೇಶ ಚಿತ್ರೀಕರಣ ಸಂದರ್ಭ ಮುರಳಿ ಮೊಣಕಾಲಿಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಸರ್ಜರಿ ಮಾಡಿಸಬೇಕೆಂದು ವೈದರು ಸೂಚಿಸಿದ್ದಾರೆ ಎಂದರು.
ಕೆಜಿಎಫ್ ಚಾಪ್ಟರ್ 2 ಮತ್ತು ಕಾಂತಾರ ಸಿನಿಮಾಗಳ ಮೆಗಾ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ಇದೀಗ ಬಘೀರ ಚಿತ್ರ ನಿರ್ಮಿಸುತ್ತಿದೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಲಕ್ಕಿ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಪೋಸ್ಟರ್ನಿಂದಲೇ ಕುತೂಹಲ ಹುಟ್ಟಿಸಿರುವ ಬಘೀರ ಕೂಡ ಶ್ರೀಮುರಳಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಡುತ್ತೆ ಎಂಬ ನಂಬಿಕೆ ಇದೆ. ಇದರ ಜೊತೆಗೆ ಮದಗಜ ಸಿನಿಮಾ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಹೀಗಾಗಿ ಶ್ರೀಮುರಳಿ ಅಭಿಮಾನಿಗಳಲ್ಲದೇ ಸ್ಯಾಂಡಲ್ವುಡ್ನಲ್ಲಿ ನಿರೀಕ್ಷೆ ಹುಟ್ಟಿಸಿದೆ.