ನವದೆಹಲಿ:ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿರುವ ನಟ ಸೋನುಸೂದ್ ಅವರ ರೈಲು ಪ್ರಯಾಣದ ವಿಡಿಯೋಗೆ ಆಕ್ಷೇಪ ವ್ಯಕ್ತವಾಗಿದೆ. ಬಾಗಿಲ ಬಳಿ ಕುಳಿತು ಪಯಣಿಸಿದ ನಟನಿಗೆ ರೈಲ್ವೆ ಇಲಾಖೆ ಮತ್ತು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರೈಲ್ವೇ ಇಲಾಖೆ ಮತ್ತು ಪೊಲೀಸರು ಹೇಳಿದ್ದೇನು? ವಿಡಿಯೋದಲ್ಲೇನಿದೆ ನೋಡೋಣ.
ಈ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ರೈಲ್ವೆ, 'ಆತ್ಮೀಯ ಸೋನುಸೂದ್ ಅವರೇ, ನಿಮ್ಮ ಈ ನಡೆಯಿಂದ ದೇಶದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದು 'ಅಪಾಯಕಾರಿ' ಪಯಣವಾಗಿದೆ. ನೀವು ದೇಶ, ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದೀರಿ. ನಿಮ್ಮ ಕಾರ್ಯಗಳ ಮೂಲಕ ಅವರೆಲ್ಲರಿಗೂ ಮಾದರಿಯಾಗಿದ್ದೀರಿ. ಚಲಿಸುತ್ತಿರುವ ರೈಲಿನ ಮೆಟ್ಟಿಲ ಮೇಲೆ ಕುಳಿತು ಪ್ರಯಾಣಿಸುವುದು ಅತ್ಯಂತ ಅಪಾಯಕಾರಿಯಾಗಿದೆ.'
'ನೀವು ಈ ರೀತಿಯಲ್ಲಿ ಪಯಣಿಸಿದ ವಿಡಿಯೋವನ್ನು ಹಂಚಿಕೊಂಡಿದ್ದು ಸರಿಯಲ್ಲ. ಅದು ನಿಮ್ಮ ಅಭಿಮಾನಿಗಳು ಮತ್ತು ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ದಯವಿಟ್ಟು ಇದನ್ನು ಮತ್ತೆ ಮಾಡಬೇಡಿ. ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಆನಂದಿಸಿ' ಎಂದು ಸಲಹೆ ನೀಡಿದೆ.
ಮುಂಬೈ ಪೊಲೀಸರಿಂದ ಎಚ್ಚರಿಕೆ:ನಟನ ಇದೇ ವಿಡಿಯೋಗೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು ಕೂಡಾ ಎಚ್ಚರಿಕೆ ನೀಡಿದ್ದಾರೆ. 'ಇದು ತೀರಾ ಅಪಾಯಕಾರಿ. ಸಿನಿಮಾದಲ್ಲಿ ಮನರಂಜನೆಯ ಭಾಗವಾಗಿ ಇದನ್ನೆಲ್ಲಾ ತೋರಿಸಲು ಸಾಧ್ಯ. ನಿಜಜೀವನದಲ್ಲಿ ಇಂತಹ ದುಸ್ಸಾಹಸ ಒಳ್ಳೆಯದಲ್ಲ. ಇದು ನಮ್ಮ ಜೀವಕ್ಕೆ ಅಪಾಯಕಾರಿ ಆಗಿದೆ. ಮೆಟ್ಟಿಲುಗಳ ಮೇಲೆ ಕುಳಿತು ಪಯಣಿಸುವುದು ಡೇಂಜರ್. ನಾವು ಎಲ್ಲ ಸುರಕ್ಷತಾ ಮಾರ್ಗಗಳನ್ನು ಅನುಸರಿಸೋಣ. ಇದರ ಖಚಿತತೆಯೊಂದಿಗೆ ಹೊಸ ವರ್ಷವನ್ನು ಸಂಭ್ರಮಿಸೋಣ' ಎಂದು ಟ್ವೀಟ್ ಮಾಡಿದ್ದಾರೆ.
ನಟನ ಡೇಂಜರಸ್ ವಿಡಿಯೋ:ನಟ ಸೋನು ಸೂದ್ ಅವರು ಡಿಸೆಂಬರ್ 13 ರಂದು ತಾವು ರೈಲಿನಲ್ಲಿ ಪಯಣಿಸಿದ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ರೈಲಿನ ಬಾಗಿಲ ಬಳಿ ಕುಳಿತು, ಹೊರಗೆ ಇಣುಕುತ್ತಿದ್ದಾರೆ. ಫುಟ್‌ಬೋರ್ಡ್‌ನಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವುದರ ಬಗ್ಗೆ ಅಭಿಮಾನಿಗಳೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ನೀವು ಈ ರೀತಿ ವಿಡಿಯೋ ಮಾಡಿ ಹಂಚಿಕೊಂಡರೆ, ನಿಮ್ಮನ್ನೇ ಹಿಂಬಾಲಿಸುವ ಅಭಿಮಾನಿಗಳು ಹೀಗೆ ಮಾಡಲು ಹೋಗಿ ಜೀವಕ್ಕೆ ಅಪಾಯ ಮಾಡಿಕೊಂಡರೆ ಹೇಗೆ?' ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಉಗ್ರರ ದಾಳಿ: ರಾಜೌರಿ, ಪೂಂಚ್ನಲ್ಲಿ 2 ಸಾವಿರಕ್ಕೂ ಹೆಚ್ಚು ಯೋಧರ ನಿಯೋಜನೆ