ರೈತ ದೇಶದ ಬೆನ್ನೆಲುಬು. ನಾವು ಎಷ್ಟೇ ಆಧುನಿಕವಾಗಿ ಮುಂದುವರಿದರೂ ರೈತನ ಕೊಡುಗೆ ನಮ್ಮೆಲ್ಲರಿಗೂ ಬಹಳ ಮುಖ್ಯ. ರೈತ ಜೀವನದ ಕಥಾಹಂದರ ಒಳಗೊಂಡಿರುವ, ರೈತನ ಬದುಕು, ಬವಣೆಗಳೊಂದಿಗೆ ಹಳ್ಳಿಯ ಸೊಗಡು, ಗ್ರಾಮೀಣ ಕಲೆಗಳು ಜೊತೆಗೆ ಸ್ನೇಹ, ಪ್ರೀತಿ, ಬಾಂಧವ್ಯ ಹೀಗೆ ಎಲ್ಲ ಅಂಶಗಳನ್ನು ಬೆಸೆದುಕೊಂಡು ತೆರೆ ಮೇಲೆ ಬರಲು ಸಿದ್ಧವಾಗುತ್ತಿರುವ ಚಿತ್ರವೇ ಶ್ರೀಮಂತ.
ರೈತ ಗೀತೆ ಬಿಡುಗಡೆ:ಬಾಲಿವುಡ್ ನಟ ಸೋನು ಸೂದ್ ನಾಯಕನಾಗಿ ಅಭಿನಯಿಸಿರುವ ಶ್ರೀಮಂತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆಯ ಲಿರಿಕಲ್ ವಿಡಿಯೋ ಹಾಡೊಂದನ್ನು ಬೆಂಗಳೂರಿನ ಕಲಾವಿದರ ಭವನದಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಾದಬ್ರಹ್ಮ ಡಾ. ಹಂಸಲೇಖ ಹಾಗೂ ಯುವ ರೈತ ಮುಖಂಡರಾದ ಸಂತೋಷ್ ಹಾಗೂ ಚಿರಂತ್ ಆಗಮಿಸಿ ಪೋಸ್ಟರ್ ಲಾಂಚ್ ಮಾಡಿದರು. ಹಾಗೆಯೇ ರೈತನ ಕುರಿತಾದ 'ಮಳೆ ಮುನಿದರೆ ಸಂತ.. ಜನಪದ ಸಂತ.. ಜನಪದ ಸಂತ...' ಎಂಬ ಹಾಡನ್ನು ಹಂಸಲೇಖ ಹಾಗೂ ನಿರ್ಮಾಪಕ ಜಿ. ನಾರಾಣಪ್ಪ ಅವರು ಬಿಡುಗಡೆ ಮಾಡಿದರು. ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠಸಿರಿಯಲ್ಲಿ ಹೊರ ಬಂದಿದ್ದು, ಇದು ಅವರ ಕೊನೆ ಹಾಡಾಗಿದೆ.
ಅಪ್ಪು ಇಲ್ಲದ ಜಾಗ ಇಲ್ಲ: ಬಳಿಕ ಮಾತನಾಡಿದ ಹಂಸಲೇಖ ಅವರು, ರೈತ ಗೀತೆ ಬಿಡುಗಡೆ ಮಾಡಿದ ಕ್ಷಣ ಎಂದಿಗೂ ಮರೆಯಲಾಗದ ಕ್ಷಣ. ಹಾಡು ಬಹಳ ಸೊಗಸಾಗಿ ಬಂದಿದೆ. ಈ ಸಭಾಂಗಣಕ್ಕೆ ಬರುತ್ತಿದ್ದಂತೆ ನಾನು ನನ್ನ ದೇವರು ಎಸ್ಪಿಬಿ ಅವರಿಗೆ ಹಾಗೂ ಅಪ್ಪುಗೆ ಕೈಮುಗಿದೆ. ಅವರು ವಯಸ್ಸಿನಲ್ಲಿ ಚಿಕ್ಕವರಾದರೂ ಅವರ ಸಾಧನೆ ಅಪಾರ. ಅಪ್ಪು ಇಲ್ಲದ ಜಾಗ ಇಲ್ಲವೇ ಇಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಇಂತಹ ಮಹಾನ್ ಸಾಧನೆ ಮಾಡಿ ಎಲ್ಲರ ಮನಸ್ಸಿನ ಭಗವಂತರಾಗಿದ್ದಾರೆ ಅಪ್ಪು ಎಂದು ದಿ. ಪುನೀತ್ ರಾಜ್ಕುಮಾರ್ ಬಗ್ಗೆ ಗುಣಗಾನ ಮಾಡಿದರು.
ಹಾಗೆಯೇ ಅವರ ದೇವರ ದಿ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಗ್ಗೆ ಮಾತನಾಡುತ್ತ, ಬಹುತೇಕ ಎಲ್ಲ ಭಾಷೆಯಲ್ಲೂ ಹಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ, ಪ್ರೀತಿ, ವಿಶ್ವಾಸವನ್ನು ಗಳಿಸಿದ ನನ್ನ ದೇವರು ಹಾಡಿದ ಕೊನೆಯ ಹಾಡು ಈ ರೈತ ಗೀತೆ. ನನ್ನ ಜೀವನದಲ್ಲೇ ಮರೆಯಲಾಗದ ಹಾಡು ಇದಾಗಲಿದೆ. ಎಸ್.ಪಿ.ಬಿ 50 ವರ್ಷಗಳಲ್ಲಿ ಎಲ್ಲ ಭಾಷೆಯಲ್ಲಿ ಹಾಡಿದ್ದಾರೆ. ಅಪ್ಪು ಕೂಡ 45 ವರ್ಷದಲ್ಲೇ ಮನೆ ಮನೆಗೆ ತಲುಪಿದ್ದಾರೆ ಎಂದರು.
ಯುವ ಕಲಾವಿದರಿಗೆ ನನ್ನ ಸಾಥ್:ಇನ್ನೂ 80 ವರ್ಷದ ಕನ್ನಡ ಚಿತ್ರರಂಗವನ್ನು ರೈತ ಸಮುದಾಯ ಕಾಯ್ದಿದೆ. ಯುವನಟರೇ ಜನಪದ ಕಥೆ ಇಟ್ಟು ಸಿನಿಮಾ ಮಾಡಿ. ನೀವು ಮುಂದಾದರೆ ನಾನು ಕೂಡ ನಿಮ್ಮ ಜೊತೆ ನಿರ್ಮಾಣದಲ್ಲಿ ಸಾಥ್ ನೀಡುತ್ತೇನೆ ಎಂದರು.