ಹೈದರಾಬಾದ್: ಸ್ಯಾಂಡಲ್ವುಡ್ ನಟ ಸುದೀಪ್ ಹಾಗೂ ಬಾಲಿವುಡ್ನ ಅಜಯ್ ದೇವಗನ್ ನಡುವೆ ಉಂಟಾಗಿದ್ದ 'ಹಿಂದಿ ರಾಷ್ಟ್ರ ಭಾಷೆ'ಯ ಕುರಿತ ಟ್ವೀಟಾಟಿಕೆ ವಿಚಾರವಾಗಿ ಅನೇಕರು ಕಿಚ್ಚ ಸುದೀಪ್ ಪರ ಬ್ಯಾಟ್ ಬೀಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಸೋನು ಸೂದ್ ಸಹ ಅಜಯ್ ದೇವಗನ್ಗೆ ತಿರುಗೇಟು ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಸೋನು ಸೂದ್ ಮಾತನಾಡಿದ್ದು, ಭಾರತಕ್ಕೆ ಇರುವುದು ಒಂದೇ ಭಾಷೆ, ಅದು ಮನರಂಜನೆ ಎಂದರು.
'ಹಿಂದಿಯನ್ನು ನಾವು ರಾಷ್ಟ್ರ ಭಾಷೆ ಎಂದು ಕರೆಯಲು ಸಾಧ್ಯವಿಲ್ಲ. ನೀವು ಯಾವ ಚಿತ್ರರಂಗಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ. ನೀವು ಜನರಿಗೆ ಮನರಂಜನೆ ನೀಡಿದರೆ ಅವರು ನಿಮ್ಮನ್ನು ಪ್ರೀತಿಸಲು ಶುರು ಮಾಡುತ್ತಾರೆ. ಜೊತೆಗೆ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ' ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ. ಸಿನಿಮಾ ನಿರ್ಮಾಪಕರು ಹಾಗೂ ನಟರು ಜನರ ಸಂವೇದನೆಯನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿತುಕೊಳ್ಳಬೇಕು. ಹಿಂದಿನ ಕಾಲದ ಪರಿಸ್ಥಿತಿ ಈಗ ಇಲ್ಲ. ಒಳ್ಳೆಯ ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ' ಎಂದು ಅಭಿಪ್ರಾಯಪಟ್ಟರು.
ಹಿನ್ನೆಲೆ:ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ್ಲಲಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದ ಅಜಯ್ ದೇವಗನ್, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲವಾದರೆ, ನೇವೇಕೆ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಈಗ ಮತ್ತು ಯಾವಾಗಲೂ ರಾಷ್ಟ್ರೀಯ ಭಾಷೆಯೇ ಆಗಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಪ್ರತಿಯಾಗಿ ಸುದೀಪ್ ಕೂಡ ರಿಟ್ವೀಟ್ ಮಾಡಿ, ನಾನು ಆ ಮಾತನ್ನು ಬೇರೆಯದ್ದೇ ರೀತಿಯಲ್ಲಿ ಹೇಳಿದ್ದೆ. ನಮ್ಮ ದೇಶದಲ್ಲಿರುವ ಎಲ್ಲ ಭಾಷೆಗಳನ್ನು ನಾನು ಗೌರವಿಸುತ್ತೇನೆ. ನೀವೂ ಹಿಂದಿಯಲ್ಲಿ ಟ್ವೀಟ್ ಮಾಡಿರುವುದನ್ನು ನಾನು ಅರ್ಥ ಮಾಡಿಕೊಂಡೆ, ಅದಕ್ಕೆ ನಾನು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದರೆ ನಿಮಗೆ ಅರ್ಥವಾಗುತ್ತಿತ್ತೇ? ಎಂದು ಮರು ಪ್ರಶ್ನೆ ಮಾಡಿದರು. ನಾವೆಲ್ಲರೂ ಹಿಂದಿ ಭಾಷೆಯನ್ನು ಗೌರವಿಸಿದ್ದೇವೆ, ಪ್ರೀತಿಸಿ ಅದನ್ನು ಕಲಿತಿದ್ದೇವೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್? ಎಂದು ಗೌರವಯುತವಾಗಿಯೇ ಪ್ರತಿಕ್ರಿಯೆ ನೀಡಿದ್ದರು.