ಪಾಟ್ನಾ (ಬಿಹಾರ): ಬಾಲಿವುಡ್ ನಟ ಸೋನು ಸೂದ್ ಅವರು ಬಿಹಾರದ ನಳಂದದ ನಿವಾಸಿ ವೈರಲ್ ಆದ ಬಾಲಕ ಸೋನು ಕುಮಾರ್ನನ್ನು ಪಾಟ್ನಾ ಜಿಲ್ಲೆಯ ಬಿಹ್ತಾ ಬ್ಲಾಕ್‌ನ ರಾಘೋಪುರದ ಐಡಿಯಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಈ ಶಾಲೆಯಲ್ಲಿ ಹಾಸ್ಟೆಲ್ ಸೌಲಭ್ಯ ಸಹ ಇದೆ. ಇನ್ಮುಂದೆ ಬಾಲಕ ಸೋನು ಯಾವುದೇ ಕೊರತೆ ಇಲ್ಲದೇ ಓದಬಹುದಾಗಿದೆ. ಈ ಸಂಬಂಧ ನಟ ಸೋನು ಸೂದ್ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ- ಸೋನು, ಸೋನು ಸಹೋದರನ ಮಾತನ್ನು ಆಲಿಸಿದ್ದಾನೆ. ಶಾಲೆಯ ಬ್ಯಾಗ್ನ್ನು ರೆಡಿ ಮಾಡಿಟ್ಟುಕೊಳ್ಳಿ. ನೀವು ಶಿಕ್ಷಣ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್ ಸೌಲಭ್ಯ ಸಹ ಇದೆ. ಇದರೊಂದಿಗೆ ನಟ ಸೋನು ಸೂದ್ ಶಾಲೆಯ ಹೆಸರನ್ನೂ ಸಹ ಬರೆದಿದ್ದಾರೆ. ಸೋನು ಸೂದ್ ಅವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಕ ಸೋನು ಕುಮಾರ್‌ಗೆ ಸಹಾಯ ಮಾಡಿದ ನಟ ಸೋನು ಸೂದ್ ಮೇ 14 ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಳಂದಾಗೆ ಬಂದಿದ್ದರು. ಸಿಎಂ ತಮ್ಮ ದಿವಂಗತ ಪತ್ನಿ ಮಂಜು ಸಿನ್ಹಾ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಕಲ್ಯಾಣ್ ಬಿಘಾ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಕಲ್ಯಾಣ್ ಬಿಘಾದ ಮೇಲ್ದರ್ಜೆಗೇರಿದ ಮಿಡ್ಲ್ ಸ್ಕೂಲ್ನಲ್ಲಿ ನಡೆದ ಸಾಮೂಹಿಕ ಸಂವಾದ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಈ ವೇಳೆ 11 ವರ್ಷದ ಬಾಲಕ ಸೋನು ಕುಮಾರ್ ಸಿಎಂ ಬಳಿ ತನಗೆ ಉತ್ತಮ ಶಿಕ್ಷಣ ನೀಡುವಂತೆ ಒತ್ತಾಯಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ನೋಡಿದ ನಟ ಸೋನು ಸೂದ್ ಅವರು ಬಾಲಕನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಈ ಹಿಂದೆ ಕೋವಿಡ್ ಬಿಕ್ಕಟ್ಟಿನಲ್ಲಿ ನೊಂದ ಜನರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮರೆದು ಮಾದರಿಯಾಗಿದ್ದ ಸೋನು ಸೂದ್ ಇದೀಗ ಬಡ ವಿದ್ಯಾರ್ಥಿಯ ಬದುಕು ಬೆಳಗಿಸಲು ಸಹಾಯಕ್ಕೆ ಮುಂದಾಗುವ ಮೂಲಕ ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗ್ತಿದೆ.
ಇದನ್ನೂ ಓದಿ:ತಂದೆ ಮದ್ಯಪಾನ ವ್ಯಸನಿ; 'ಅಧ್ಯಯನಕ್ಕಾಗಿ ಸಹಾಯ ಮಾಡಿ'.. ಸಿಎಂ ಎದುರು ವಿದ್ಯಾರ್ಥಿಯ ಮನವಿ