ಗೋಲ್ಮಾಲ್ 3, ಗೋಲ್ಮಾಲ್ ರಿಟರ್ನ್ಸ್ ಸೇರಿದಂತೆ ಹಲವು ಕಾಮಿಡಿ ಸಿನಿಮಾಗಳ ಮೂಲಕ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಜನಪ್ರಿಯ ನಟನ ಹೃದಯಾಘಾತದ ಸುದ್ದಿಯಿಂದ ಅಭಿಮಾನಿಗಳೂ ಸೇರಿದಂತೆ ಬಾಲಿವುಡ್ ಬೆಚ್ಚಿಬಿದ್ದಿದೆ. ಅದಾಗ್ಯೂ ಕಠಿಣ ಕ್ಷಣಗಳ ವಿರುದ್ಧ ಹೋರಾಡಿ ಚೇತರಿಸಿಕೊಳ್ಳುವಲ್ಲಿ ಬಾಲಿವುಡ್ ತಾರೆ ಯಶಸ್ವಿಯಾಗಿದ್ದಾರೆ. ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ನಟನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ನಟ ಶ್ರೇಯಸ್ ತಲ್ಪಾಡೆ ಸ್ಥಿತಿ ಸ್ಥಿರವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 14 ರಂದು (ಗುರುವಾರ) ಮುಂಬೈನಲ್ಲಿ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ವೆಲ್ಕಮ್ ಟು ದಿ ಜಂಗಲ್ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು. ಸಂಜೆ ವೇಳೆ ನಟನಿಗೆ ಅಸ್ವಸ್ಥತೆ ಉಂಟಾಗಿ, ಹೃದಯಾಘಾತವಾಯಿತು ಎಂದು ವರದಿಯಾಗಿದೆ. ಸದ್ಯ ನಟನ ಆರೋಗ್ಯ ಸ್ಥಿರವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಗ್ಗೆ ತಮ್ಮ ಕುಟುಂಬಸ್ಥರೊಂದಿಗೆ ಕೆಲ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ.
ಶ್ರೇಯಸ್ ತಲ್ಪಾಡೆ ಅವರು ಅಪ್ನಾ ಸಪ್ನಾ ಮನಿ ಮನಿ, ಡೋರ್, ಓಂ ಶಾಂತಿ ಓಂ, ಗೋಲ್ಮಾಲ್ ರಿಟರ್ನ್ಸ್ ಮತ್ತು ವೆಲ್ಕಮ್ ಟು ಸಜ್ಜನ್ಪುರದಂತಹ ಹಲವು ಸಿನಿಮಾಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ಮರಾಠಿ ಮನರಂಜನಾ ವಲಯದಲ್ಲಿಯೂ ಮನ್ನಣೆ ಗಳಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಉತ್ತಮ ಅಭಿನಯಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.