ವಿಭಿನ್ನ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ನಟ ಶ್ರೀನಗರ ಕಿಟ್ಟಿ. ಮಾಸ್ ಲುಕ್ನಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಗೌಳಿ. ಗೌಳಿ ಈಗಾಗಲೇ ತನ್ನ ಟೀಸರ್ ಹಾಗೂ ತಂದೆ, ಮಗಳ ನಡುವಿನ ಬಾಂಧವ್ಯದ ಹಾಡಿನಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಗೌಳಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಕ್ತಾಯ ಹಂತ ತಲುಪಿವೆ.
ಇತ್ತೀಚೆಗೆ ಗೌಳಿಯ ಡ್ಯುಯೆಟ್ ಹಾಡಿನ ಶೂಟಿಂಗ್ ಸಹ ಮುಕ್ತಾಯಗೊಂಡಿದೆ. ಕನಕಪುರ ಹತ್ತಿರದ ಸಂಗಮ ಫಾಲ್ಸ್ ಹಾಗೂ ನದಿಯ ಬ್ಯಾಕ್ ವಾಟರ್‌ನಲ್ಲಿ ಪ್ರೇಮ ಗೀತೆಯ ಚಿತ್ರೀಕರಣ ನಡೆದಿದೆ. ಹಳ್ಳಿ ವಾತಾವರಣದಲ್ಲಿ ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದ್ದು, ನಾಯಕ ಶ್ರೀನಗರ ಕಿಟ್ಟಿ, ನಾಯಕಿ ಪಾವನಾಗೌಡ ಸೇರಿದಂತೆ 50ಕ್ಕೂ ಹೆಚ್ಚು ಸಹ ಕಲಾವಿದರು ಇದ್ದರು.
ಶ್ರೀನಗರ ಕಿಟ್ಟಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ನಟಿ ಪಾವನಾ ಗೌಡ ಮೊದಲ ಬಾರಿಗೆ ಪಕ್ಕಾ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಯಶ್‌ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಹೀಗೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ.