ನಟ ಶಿವರಾಜ್ ಕುಮಾರ್ ಅವರು ತೀವ್ರ ಜ್ವರದ ಹಿನ್ನೆಲೆ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದರು. ಘೋಸ್ಟ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದ ಕಾರಣ ಶಿವರಾಜ್ ಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಜಾಸ್ತಿ ಆದ ಕಾರಣ ಶಿವರಾಜ್ ಕುಮಾರ್ ಇಂದು ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಚೇತರಿಸಿಕೊಂಡ ಶಿವಣ್ಣ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ವೈದೇಹಿ ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿಯ ಪ್ರಕಾರ, ಓಡಾಟ ಹಾಗೂ ಬಿಡುವಿಲ್ಲದ ಶೂಟಿಂಗ್ ನಿಂದಾಗಿ ಶಿವರಾಜ್ ಕುಮಾರ್ ಅವರಿಗ ಜ್ವರ ಬಂದಿತ್ತು. ಅತಿಯಾದ ಜ್ವರ ಹೆಚ್ಚಾದ ಕಾರಣ ಮಧ್ಯಾಹ್ನ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಿ ಕೊಡಲಾಗಿದೆ. ಅವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯಿಂದ ಮನೆಗೆ ತೆರಳಿರುವ ಶಿವರಾಜ್ ಕುಮಾರ್ ಅವರಿಗೆ ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.