ಬೆಂಗಳೂರು: 'ಭೀಮ'...ಟೈಟಲ್ ಹಾಗು ಮೇಕಿಂಗ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ದುನಿಯಾ ವಿಜಯ್ ಸಲಗ ಸಿನಿಮಾದ ದೊಡ್ಡ ಸಕ್ಸಸ್ ಬಳಿಕ ಆ್ಯಕ್ಷನ್ ಕಟ್ ಹೇಳುತ್ತಿರುವ ಮತ್ತೊಂದು ಮಾಸ್ ಸಿನಿಮಾ. ಈ ಸಿನಿಮಾ ಚಿತ್ರೀಕರಣಕ್ಕೂ ಮುನ್ನ 1.50ಕೋಟಿ ರೂಪಾಯಿಗೆ ಈ ಚಿತ್ರದ ಆಡಿಯೋ ರೈಟ್ಸ್ ಅನ್ನು ಆನಂದ್ ಆಡಿಯೋ ಸಂಸ್ಥೆ ಖರೀದಿಸುವ ಮೂಲಕ ಸುದ್ದಿಯಾಗಿತ್ತು. ಈಗ ದುನಿಯಾ ವಿಜಯ್ ಅವರ ಭೀಮ ಶೂಟಿಂಗ್ ಅಡ್ಡಕ್ಕೆ ಶಿವಣ್ಣ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ.
ಬೆಂಗಳೂರಿನ ಮನೆಯೊಂದರಲ್ಲಿ ಭೀಮ ಸಿನಿಮಾದ ಚಿತ್ರೀಕರಣವನ್ನು ವಿಜಯ್ ಮಾಡುತ್ತಿದ್ದಾರೆ. ಇಲ್ಲಿಗೆ ನಟ ಶಿವ ರಾಜ್‍ಕುಮಾರ್ ಭೀಮ ಚಿತ್ರದ ಶೂಟಿಂಗ್ ಸ್ಪಾಟ್ಗೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ವಿಜಯ್ ಹಾಗು ನಿರ್ಮಾಪಕ ಕೃಷ್ಣ ಸಾರ್ಥಕ್ ಶಿವ ರಾಜ್‍ಕುಮಾರ್ ಹಾಗು ಗೀತಾ ಶಿವರಾಜ್ಕುಮಾರ್ ಅವರನ್ನು ರಿಸೀವ್ ಮಾಡಿಕೊಂಡರು.
ಭೀಮ ಶೂಟಿಂಗ್ ಅಡ್ಡಕ್ಕೆ ಶಿವಣ್ಣ ಬಳಿಕ ಶಿವ ರಾಜ್‍ಕುಮಾರ್ ಹಾಗು ಪತ್ನಿ ಗೀತಾ ಟೀ ಕುಡಿದು, ಶೂಟಿಂಗ್ ಹೇಗೆ ಸಾಗುತ್ತಿದೆ ಅನ್ನೋ ಬಗ್ಗೆ ವಿಚಾರಿಸಿದ್ದಾರೆ. ಕೊನೆಯಲ್ಲಿ ವಿಜಯ್ ಅವರು ಶಿವರಾಜ್ಕುಮಾರ್ ಹಾಗು ಗೀತಾ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಬೀಳ್ಕೊಟ್ಟಿದ್ದಾರೆ.
ಇನ್ನು, ಸಹೋದರ ಪುನೀತ್ ರಾಜ್‍ಕುಮಾರ್ ಅಗಲಿಕೆಯಿಂದ ನೊಂದಿರುವ ಶಿವ ರಾಜ್‍ಕುಮಾರ್ ಚಿತ್ರ ರಂಗದಲ್ಲಿರುವ ನಟರನ್ನು ತಮ್ಮ ಸಹೋದರನಂತೆ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಬಿಡುವಿನ ವೇಳೆ ಚಿತ್ರರಂಗದ ಎಲ್ಲಾ ನಟರ ಸಿನಿಮಾ ಶೂಟಿಂಗ್ ಸ್ಪಾಟ್ಗೆ ಭೇಟಿ ಕೊಡುತ್ತಿದ್ದಾರೆ.
ದುನಿಯಾ ವಿಜಯ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಭೀಮ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದಾರೆ. ಸದ್ಯ ಮೂರನೇ ಶೆಡ್ಯೂಲ್ ಚಿತ್ರೀಕರಣ ಶುರು ಮಾಡಿರೋ ವಿಜಯ್ ರಂಗಭೂಮಿ ಹಾಗು ಹೊಸ ಪ್ರತಿಭೆಗಳಿಗೆ ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ.
ಇದನ್ನೂ ಓದಿ:ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ.. ತಾತ ಮೊಮ್ಮಗನಾಗಿ ಅನಂತ್ ನಾಗ್-ದಿಗಂತ್
ಭೀಮ ಸಿನಿಮಾ ಕೂಡ ಒಂದು ನೈಜ ಘಟನೆಯ ಚಿತ್ರ ಆಗಿದ್ದು, ದುನಿಯಾ ವಿಜಯ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ನಟನೆಯ 28ನೇ ಸಿನಿಮಾ ಇದಾಗಿದ್ದು, ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾದ ಶೂಟಿಂಗ್ ಸ್ಪಾಟ್ಗೆ ದೊಡ್ಮನೆಯವರು ಬಂದು ಹೋಗಿರೋದು ಚಿತ್ರತಂಡದವರ ಹುರುಪು ಹೆಚ್ಚಿಸಿದೆ.