ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ದಿನಗಳಿಂದ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ಮನಸ್ತಾಪ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುದೀಪ್ ನನ್ನ ಬಳಿ ಹಣ ಪಡೆದು, ಸಿನಿಮಾ ಮಾಡಲು ಕಾಲ್ಶೀಟ್ ನೀಡುತ್ತಿಲ್ಲ ಎಂದು ನಿರ್ಮಾಪಕ ಕುಮಾರ್ ಅವರು ಆರೋಪ ಮಾಡಿದ್ದರು. ಇದು ಕಿಚ್ಚ ಸುದೀಪ್ ಇಮೇಜ್ಗೆ ಡ್ಯಾಮೇಜ್ ಆದ ಹಿನ್ನೆಲೆಯಲ್ಲಿ ಸುದೀಪ್ ಕಾನೂನು ಮೂಲಕ ನಾನು ಉತ್ತರ ಕೊಡುತ್ತೇನೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಳಿಕ ನಿನ್ನೆ ಕೆಲ ನಿರ್ಮಾಪಕರು ಹಿರಿಯ ನಟ ರವಿಚಂದ್ರನ್ ಅವರನ್ನು ಭೇಟಿ ಮಾಡಿ ಈ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ರವಿಚಂದ್ರನ್ ಅವರು ಈ ಸಮಸ್ಯೆ ಬಗ್ಗೆ ತಿಳಿದುಕೊಂಡು ಶಿವರಾಜ್ಕುಮಾರ್ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡೋಣ ಎಂದು ತಿಳಿಸಿದರು.
ಇಂದು ಕೆಲ ನಿರ್ಮಾಪಕರು ನಟ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಈ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಮಯದಲ್ಲಿ ನಿರ್ಮಾಪಕ ಕುಮಾರ್ ಅವರು ಶಿವಣ್ಣನ ಬಳಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಮಾರ್ ಮನವಿಗೆ ಶಿವರಾಜ್ಕುಮಾರ್ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿ ಇದೆ.
ಈ ವಿವಾದದ ಕುರಿತು ನಟ ಶಿವರಾಜ್ಕುಮಾರ್ ಮಾತನಾಡಿದ್ದು, ಚಿತ್ರರಂಗ ಒಂದು ಫ್ಯಾಮಿಲಿ ಇದ್ದಂತೆ. ಕುಮಾರ್ ಹಾಗೂ ಸುದೀಪ್ ನಡುವೆ ನಡೆದಿರೋ ಘಟನೆ ಬಗ್ಗೆ ಅವರಿಗೇನೆ ಗೊತ್ತು. ಚಿತ್ರರಂಗದಲ್ಲಿ ನಿರ್ಮಾಪಕರು ಹಾಗೂ ನಟರು ಎರಡು ಪಿಲ್ಲರ್ ಇದ್ದಂತೆ. ಅಪ್ಪಾಜಿ ಸಾಹುಕಾರ ಅಂತಾ ರವಿಚಂದ್ರನ್ ಸರ್ ಅವರನ್ನು ಕರೆಯುತ್ತಿದ್ದರು. ಅವರು ಸಿನಿಮಾ ಇಂಡಸ್ಟ್ರಿಗೆ ಬಂದು 40 ವರ್ಷ ಆಯ್ತು. ಈ ಪ್ರಕರಣ, ರವಿಚಂದ್ರ ಸರ್ ಏನ್ ಹೇಳ್ತಾರೆ ಅದರ ಮೇಲೆ ನಿಲ್ಲುತ್ತೆ ಎಂದರು.