ಬೆಳಗಾವಿ: 'ವೇದ' ಕರುನಾಡ ಚಕ್ರವರ್ತಿಯ 125ನೇ ಚಿತ್ರ. ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅಭಿನಯದ ಈ ವೇದ ಸಿನಿಮಾ ಡಿಸೆಂಬರ್ 30 ರಂದು ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಸಿನಿ ಪ್ರಿಯರು ಭೇಷ್ ಎಂದಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ರಿಲೀಸ್ ಆಗಿರುವ ಈ ಸಿನಿಮಾ ಚಿತ್ರ ಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ.
ವೇದ ಸಿನಿಮಾದ ಭರ್ಜರಿ ಯಶಸ್ವಿಗೆ ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ಚಿತ್ರತಂಡ ಪ್ರತಿ ಜಿಲ್ಲೆಗೂ ಭೇಟಿ ನೀಟಿ ಸಿನಿಮಾ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ನಟ ಶಿವ ರಾಜ್ಕುಮಾರ್ ಅವರಿಗೆ ಪತ್ನಿ, ಈ ಚಿತ್ರದ ನಿರ್ಮಾಪಕಿಯೂ ಆಗಿರುವ ಗೀತಾ ಶಿವ ರಾಜ್ಕುಮಾರ್ ಸಾಥ್ ನೀಡಿದ್ದಾರೆ. ಇಂದು ಬೆಳಗಾವಿಗೆ ಭೇಟಿ ಕೊಟ್ಟಿದ್ದು, ಕರ್ನಾಟಕ ಗಡಿ ವಿಚಾರವಾಗಿ ಶಿವಣ್ಣ ಮಾತನಾಡಿದ್ದಾರೆ.
ಮೊದಲು ನಾವು ಭಾರತಿಯರು: ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಟ ಶಿವ ರಾಜ್ಕುಮಾರ್, ಮಹಾರಾಷ್ಟ್ರ - ಕರ್ನಾಟಕ ಗಡಿ ವಿಚಾರದಲ್ಲಿ ನಮ್ಮ ರಾಜಕೀಯ ನಾಯಕರು ದೊಡ್ಡ ಮನಸ್ಸು ಮಾಡಿ ವ್ಯವಸ್ಥೆ ಸರಿ ಪಡಿಸಬೇಕು. ಗಡಿ ವಿಚಾರ ಏನೇ ಇದ್ದರೂ ಮೊದಲು ನಾವು ಭಾರತಿಯರು, ನಾವೆಲ್ಲರೂ ಒಂದೇ ಎಂದು ಭಾವಿಸಬೇಕು. ಯಾರ ಮೆಲೂ ದ್ವೇಷವಿಲ್ಲ, ಎಲ್ಲರೂ ಚೆನ್ನಾಗಿರಲಿ, ನಾವು ಮೊದಲು ಎಲ್ಲಿ ಬಾಳುತ್ತಿದ್ದೇವೆ ಎಂಬುದು ಮುಖ್ಯ. ಮೊದಲು ಕನ್ನಡಕ್ಕೆ ಗೌರವ ಕೊಡಬೇಕು ಎಂದರು.
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ:ನಾನು ಮುಂಬರುವ ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಆಚರಣೆ ಮಾಡುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು. ಇನ್ನು ವೇದ ಚಿತ್ರ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಚಿತ್ರ ವೀಕ್ಷಣೆ ಮಾಡುತ್ತಿರುವುದು ನಮಗೆ ಸಂತಸ ಕೊಟ್ಟಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.