ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಯಶಸ್ಸು ಕಾಣಬೇಕೆಂದು ಅದೆಷ್ಟೋ ಪ್ರತಿಭೆಗಳು ಕನಸು ಇಟ್ಟುಕೊಂಡು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಕೆಲವರಿಗೆ ಮಾತ್ರ ಈ ಬಣ್ಣದ ಲೋಕ ಕೈ ಹಿಡಿಯುತ್ತದೆ. ಈ ಸಾಲಿನಲ್ಲಿ ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಕೂಡ ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಂದೆಯಂತೆ ಸಕ್ಸಸ್ ಕಾಣಲು ಶ್ರಮ ಹಾಕುತ್ತಿದ್ದಾರೆ. ಕ್ಯಾಚೀ ಟೈಟಲ್ ಇರುವ ಖೆಯೊಸ್ ಎಂಬ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹೌದು, ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ಯಶಸ್ವಿಯಾಗುತ್ತಿದೆ. ಇಂತಹದ್ದೇ ಉತ್ತಮ ಕಂಟೆಂಟ್ನೊಂದಿಗೆ ಖೆಯೊಸ್ ಸಿನಿಮಾ ಬರುತ್ತಿದೆ.
ಸದ್ಯ ಪೋಸ್ಟರ್ ಹಾಗು ಟೀಸರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ 'ಖೆಯೊಸ್' ಚಿತ್ರತಂಡ ಬಿಡುಗಡೆ ಡೇಟ್ ಅನೌನ್ಸ್ ಮಾಡಿ ಈ ಚಿತ್ರದ ಸ್ಪೆಷಾಲಿಟಿ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮೊದಲಿಗೆ ಮಾತನಾಡಿದ ಅಕ್ಷಿತ್ ಶಶಿಕುಮಾರ್, ನಾನು ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. "ಖೆಯೊಸ್" ಅಂದರೆ ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ. ಇದು ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆ. ನಾಯಕ ಅನಿರೀಕ್ಷಿತವಾಗಿ ಒಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಆತ ತನ್ನ ಜಾಣ್ಮೆಯಿಂದ ಹೇಗೆ ಆ ಸಮಸ್ಯೆಯಿಂದ ಪಾರಾಗುತ್ತಾನೆ ಎಂಬುದು ಕಥಾಹಂದರ.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಅವರು ಕಥೆ ಹೇಳುವಾಗ ನಾನು ಗಡ್ಡ ಬಿಟ್ಡಿದ್ದೆ. ನಮ್ಮ ಪಾತ್ರಕ್ಕೆ ಈ ರೀತಿಯ ಗೆಟಪ್ ಬೇಕಿತ್ತು ಎಂದರು. ಎಂಬಿಬಿಎಸ್ ಓದುತ್ತಿರುವ ಹುಡುಗನ ಪಾತ್ರ ನನ್ನದು. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಮ್ಮ ತಂದೆ ಕೂಡ ಇದರಲ್ಲಿ ನಟಿಸಿದ್ದಾರೆ. ಈ ಸಿನಿಮಾ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಅಂತಾ ಅಕ್ಷಿತ್ ವಿಶ್ವಾಸ ವ್ಯಕ್ತಪಡಿಸಿದರು.