ಕರ್ನಾಟಕ

karnataka

ETV Bharat / entertainment

ಸಂಚಾರಿ ವಿಜಯ್​ ಎರಡನೇ ಪುಣ್ಯಸ್ಮರಣೆ: ಹೋಟೆಲ್​ ಕೆಲ್ಸ ಮಾಡ್ತಾ ಸಿನಿಮಾ ಹೀರೋ ಆದ ನಟರಿವರು..

ನಟ ಸಂಚಾರಿ ವಿಜಯ್​ ನಮ್ಮನ್ನಗಲಿ ಇಂದಿಗೆ ಎರಡು ವರ್ಷವಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಈ ನಟನ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳು ನಿಮಗಾಗಿ ಇಲ್ಲಿವೆ..

sanchari vijay
ಸಂಚಾರಿ ವಿಜಯ್​

By

Published : Jun 15, 2023, 6:57 PM IST

ನಟ ಸಂಚಾರಿ ವಿಜಯ್ ಬದುಕಿನ ಸಂಚಾರ ಮುಗಿಸಿ ಇಂದಿಗೆ ಎರಡು ವರ್ಷಗಳಾಗಿವೆ. ಆದರೆ ಅವರಿಂದು ನಮ್ಮೊಂದಿಗೆ ಇಲ್ಲವೆಂಬ ಸುದ್ದಿಯನ್ನು ನಂಬುವುದು ಕಷ್ಟವೇ ಸರಿ. ಸಂಚಾರಿ ವಿಜಯ್​ ಇಲ್ಲಿ ಎಲ್ಲೋ ಸಂಚಾರ ಮಾಡ್ತಾ ಇದ್ದಾರೆ ಅನ್ನೋ ಭಾವ ಕನ್ನಡ ಚಿತ್ರರಂಗದ ಅನೇಕರಲ್ಲಿದೆ. ಅವರ ಅಭಿನಯವನ್ನು ಮೆಚ್ಚಿ ಅಭಿಮಾನಿಯಾದ ಅಭಿಮಾನಿಗಳಲ್ಲೂ ಅವರ ನೆನಪು ಇನ್ನೂ ಹಸಿರಾಗಿದೆ.

ಸ್ಯಾಂಡಲ್​ವುಡ್​ಗೆ ನಿಜಕ್ಕೂ ವಿಜಯ್​ರಂತಹ ಅದ್ಭುತ ಕಲಾವಿದ ಮತ್ತೆ ಸಿಗಲಾರ. ಅವರ ಸ್ಥಾನವನ್ನೂ ಯಾರು ತುಂಬಲಾರ. ಯಾಕಂದ್ರೆ ಸಂಚಾರಿ ವಿಜಯ್ ಕೇವಲ ಅಪ್ರತಿಮ ಕಲಾವಿದ ಮಾತ್ರ ಆಗಿರಲಿಲ್ಲ. ಅಷ್ಟೇ ಅತ್ಯುತ್ತಮ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಇದಕ್ಕೆ ಕೊರೊನಾ ಸಮಯದಲ್ಲಿ ಹಗಲಿರುಳು ಸಂಚಾರಿ ವಿಜಯ್ ನಡೆಸಿದ್ದ ಸಂಚಾರವೇ ಸಾಕ್ಷಿ.

ಮಾಲಿವುಡ್​ ನಟ ಮೋಹನ್​ಲಾಲ್​ ಜೊತೆ ಸಂಚಾರಿ ವಿಜಯ್​

'ಸಂಚಾರಿ' ವಿಜಯ್ ಒಂದು ಕಡೆ ನಿಂತವರಲ್ಲ. ಸಿನಿಮಾ, ರಂಗಭೂಮಿ, ಗೆಳೆಯರ ಭೇಟಿ, ಹೀಗೆಯೇ ಇರುತ್ತಿತ್ತು ಅವರ ದಿನಚರಿ. ಕೊರೊನಾದಿಂದ ಲಾಕ್‌ಡೌನ್ ಘೋಷಣೆಯಾಗಿ ದೇಶವೇ ಸ್ತಬ್ಧವಾಗಿದ್ದರೂ, ವಿಜಯ್ ಸುಮ್ಮನೇ ಕುಳಿತಿರಲಿಲ್ಲ. ಕಷ್ಟದಲ್ಲಿರುವ ಬಡವರಿಗೆ ಆಸರೆಯಾಗಿದ್ದರು. ಊಟಕ್ಕೂ ತೊಂದರೆ ಪಡುತ್ತಿದ್ದವರಿಗೆ ಫುಡ್ ಕಿಟ್ ನೀಡಿ ಹಸಿವು ನೀಗಿಸಿದ್ದರು.

ಆದರೆ ಕಾಲದ ಕರೆಗೆ ಓಗೊಟ್ಟು ಸಂಚಾರಿ ವಿಜಯ್​ ಬದುಕಿನ ಸಂಚಾರವನ್ನೇ ನಿಲ್ಲಿಸಿಬಿಟ್ಟರು. ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೇ 2021ರ ಜೂನ್ 15 ರಂದು ಇಹಲೋಕವನ್ನು ತ್ಯಜಿಸಿದರು. ವಿಜಯ್ ಬ್ರೇನ್ ಡೆಡ್ ಆಗಿದ್ದರಿಂದ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು.

ಸಂಚಾರಿ ವಿಜಯ್​

ಸಂಚಾರಿ ವಿಜಯ್ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಹಾಗೂ ಹೃದಯದ ವಾಲ್ವ್ಸ್ ದಾನ ಮಾಡಲಾಗಿತ್ತು. ಇದರಿಂದ ಏಳು ಜನರಿಗೆ ಉಪಯೋಗವಾಗಿತ್ತು. ಆ ಮೂಲಕ ಏಳು ಜನರ ಬಾಳಿಗೆ ನಟ ಸಂಚಾರಿ ವಿಜಯ್ ಬೆಳಕಾಗಿದ್ದರು. ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ನಟ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು.

ಅಂದಹಾಗೆ, 2011ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ಸಂಚಾರಿ ವಿಜಯ್, 10 ವರ್ಷ ಮಾತ್ರ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ಕೇವಲ ಹದಿನೈದನೇ ವಯಸ್ಸಿಗೆ ತಂದೆ ಮತ್ತು ತಾಯಿಯನ್ನು ಕಳೆದುಕೊಂಡ ವಿಜಯ್ ಬದುಕಿನ ಬಂಡಿಯನ್ನು ಸಾಗಿಸಲು ಹೋಟೆಲ್​​ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಹಾಗೋ ಹೀಗೋ ಮಾಡಿ ಹತ್ತನೇ ತರಗತಿಯನ್ನು ಮುಗಿಸಿ ಆ ನಂತರ ಬೇಕರಿಯಲ್ಲಿಯೂ ಕೆಲಸ ಮಾಡಿದ್ದರು.

ಕಾಲಿವುಡ್​ ನಟ ಧನುಷ್​ ಜೊತೆ ಸಂಚಾರಿ ವಿಜಯ್​

ಬೇಕರಿಗೆ ಬರುತ್ತಿದ್ದ ಕಾಲೇಜ್ ಹುಡುಗರನ್ನು ಗಮನಿಸಿ ಅವರಿಂದ ಪ್ರಭಾವಕ್ಕೆ ಒಳಗಾದ ವಿಜಯ್ ಆ ನಂತರ ಕಾಲೇಜಿನ ಮೆಟ್ಟಿಲೇರಿದ್ದರು. ಅಣ್ಣನ ಸಹಾಯದಿಂದ ಪಿಯುಸಿ ಮುಗಿಸಿ ಉತ್ತಮ ಅಂಕಗಳೊಂದಿಗೆ ಕೌನ್ಸಿಲಿಂಗ್​ನಲ್ಲಿ ಬಿಎಂಎಸ್ ಕಾಲೇಜ್​ನಲ್ಲಿ ಸೀಟ್​ ಅನ್ನೂ ಗಿಟ್ಟಿಸಿಕೊಂಡಿದ್ದರು. ತನ್ನ ಇತಿಮಿತಿಯನ್ನು ಎಂದೂ ಮರೆಯದೇ ಎಲ್ಲರೊಡಗೂಡಿ ವಿದ್ಯಾಭ್ಯಾಸ ಮಾಡಿ ಕೆ.ಎಸ್.ಇ.ಟಿ ಕಾಲೇಜಿನಲ್ಲಿ ಉಪನ್ಯಾಸಕರೂ ಆದರು.

ಆದರೆ ಚಿಕ್ಕ ವಯಸ್ಸಿನಲ್ಲಿ ತಾಯಿಯಿಂದ ಕೇಳ್ತಿದ್ದ ಜಾನಪದ ಹಾಡುಗಾರಿಕೆ, ತಂದೆ ನುಡಿಸುತ್ತಿದ್ದ ವಿವಿಧ ವಾದ್ಯಗಳ ಸಂಗೀತ ಪರಿಚಯ ಸಂಚಾರಿ ವಿಜಯ್​ಗೆ ರಕ್ತಗತವಾಗಿಯೇ ಬಂದಿತ್ತು. ಹೀಗಾಗಿಯೇ ಕಾಲೇಜಿನ ದಿನಗಳಲ್ಲಿಯೇ ದರ್ಪಣ ಎಂಬ ರಂಗ ತಂಡದ ಜೊತೆ ಗುರುತಿಸಿಕೊಂಡಿದ್ದ ವಿಜಯ್ ಮುಂದೆ ಸಂಚಾರಿ ರಂಗತಂಡಕ್ಕೆ ಸೇರಿಕೊಂಡರು. ರಾಮನಾಥ್ ರಂಗಾಯಣ ಅವರ ನಿರ್ದೇಶನದ ಅರಹಂತ ನಾಟಕದಲ್ಲಿ ಕಾರವೇಲನ ಪಾತ್ರವನ್ನು ನಿರ್ವಹಿಸಿ ಸೈ ಅನಿಸಿಕೊಂಡರು. ಕಮಲಮಣಿ ಎಂಬ ಹಾಸ್ಯ ನಾಟಕದಲ್ಲಿಯೂ ಅಭಿನಯಿಸಿ ಜನಮನ ಗೆದ್ದಿದ್ದರು.

'ರಂಗಪ್ಪ ಹೋಗ್ಬಿಟ್ನಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಸಂಚಾರಿ ವಿಜಯ್​ಗೆ ಮೊದಲ ಚಿತ್ರ ಗೆಲುವು ನೀಡಲಿಲ್ಲ. ಜನ ಕೂಡ ಅವರನ್ನು ಗುರುತಿಸಲಿಲ್ಲ. ಆ ನಂತರ ರಂಗಾಯಣ ರಘು ಅವರ ಮೂಲಕ ರಾಮ ರಾಮ ರಘುರಾಮ ಚಿತ್ರದಲ್ಲಿ ನಿತ್ಯಾನಂದನ ಪಾತ್ರ ನಿರ್ವಹಿಸಿ ಬಳಿಕ ಎಂ.ಎಸ್. ರಮೇಶ್ ನಿರ್ದೇಶನದ ವಿಲನ್ ಚಿತ್ರದಲ್ಲಿ ನಾಯಕಿಯ ತಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದರು. ದಾಸ್ವಾಳ ಸಿನಿಮಾದಲ್ಲಿ ಮಾನಸಿಕ ಅಸ್ವಸ್ಥ ಮತ್ತು ವಿಕಲಚೇತನನ ಪಾತ್ರವನ್ನ ಸಮರ್ಥವಾಗಿ ನಿಭಾಯಿಸಿದ್ದರು.

ಇದೆಲ್ಲದರ ನಡುವೆ ಲಕ್ಷ ಸಂಬಳ ಬರುವ ಅವಕಾಶವನ್ನು ಬದಿಗೊತ್ತಿ, ತಮ್ಮ ಕಾಲೇಜು ಉಪನ್ಯಾಸಕನ ವೃತ್ತಿಯಿಂದ ಆಚೆ ಬಂದಿದ್ದ ಸಂಚಾರಿ ವಿಜಯ್ ಪಿನೋಕಿಯೋ, ಮಿಸ್ ಅಂಡರ್ ಸ್ಟ್ಯಾಂಡಿಂಗ್ ನಾಟಕಗಳನ್ನು ನಿರ್ದೇಶಿಸಿದ್ದರು. ಆ ನಂತರ ಮನ್ಸೋರೇ ನಿರ್ದೇಶನದ ಹರಿವು ಚಿತ್ರದಲ್ಲಿ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದರು. 'ಹರಿವು' 62ನೇ ಸಾಲಿನ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಎಂಬ ಪ್ರಶಸ್ತಿಯನ್ನು ಪಡೆಯಿತು. ಆ ನಂತರ 'ನಾನು ಅವನಲ್ಲ ಅವಳು' ಸಿನಿಮಾ ಸಂಚಾರಿ ವಿಜಯ್ ಅವರಿಗೆ ಬಹುದೊಡ್ಡ ತಿರುವು ನೀಡಿತು. ಆ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ, ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, ಅತ್ಯುತ್ತಮ ನಟ ಫಿಲ್ಮ್​ ಫೇರ್​ ಪ್ರಶಸ್ತಿಯನ್ನು ಪಡೆದುಕೊಂಡರು.

ಆದರೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಿಜಯ್​ ಬದುಕಿನ ಸಂಚಾರ ಮುಗಿಸಲು ಹೊರಟಿದ್ದರು. ಅನೇಕ ಚಿತ್ರಗಳನ್ನು ಕೇಳಿ, ಒಂದಾದ ಮೇಲೊಂದು ಚಿತ್ರಕ್ಕೆ ಒಪ್ಪಿಕೊಂಡಿದ್ದ ವಿಜಯ್​ಗೆ ಕೈ ತುಂಬಾ ಅವಕಾಶಗಳಿತ್ತು. ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ. ಆದರೆ ಅದು ಕ್ಷಣಿಕ ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ ಅಷ್ಟೇ.

ವಿಜಯ್ ನಿಧನದ ನಂತರ ಅವರ ಅನೇಕ ಸಿನಿಮಾಗಳು ತೆರೆಗೆ ಬಂದಿವೆ. ಲಂಕೆ, ಮೇಲೊಬ್ಬ ಮಾಯಾವಿ, ಪುಕ್ಸಟ್ಟೆ ಲೈಫು, ತಲೆದಂಡ ಸಿನಿಮಾಗಳು ತೆರೆಕಂಡಿವೆ. ಈ ಸಿನಿಮಾಗಳಲ್ಲಿ ಪುಕ್ಸಟ್ಟೇ ಲೈಫು ಮತ್ತು ತಲೆದಂಡ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಕಂಡು ಸಂಚಾರಿ ವಿಜಯ್ ಬದುಕಿದ್ದರೆ ತುಂಬಾನೇ ಸಂಭ್ರಮ ಪಡುತ್ತಿದ್ದರು. ಅವರ ಅಭಿನಯದ ಪಿರಂಗಿಪುರ ಇನ್ನಷ್ಟೇ ತೆರೆಗೆ ಬರಬೇಕಿದೆ. ಈ ಚಿತ್ರದ ಮೇಲೆ ಸಂಚಾರಿ ವಿಜಯ್​ ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು.

ಇನ್ನೂ ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚನಹಳ್ಳಿ ಎಂಬ ಪುಟ್ಟ ಗ್ರಾಮ. ಅದೇ ಗ್ರಾಮದಲ್ಲಿ ವಿಜಯ್ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ವಿಜಯ್ ಅವರ ಸಮಾಧಿ ಸ್ಥಳದಲ್ಲಿ ಈಗ ಅವರದೊಂದು ಪುತ್ಥಳಿಯನ್ನು ಸಹ ನಿರ್ಮಾಣ ಮಾಡಲಾಗಿದೆ. ಒಟ್ಟಿನಲ್ಲಿ ಕನ್ನಡದ ಕಲಾ ಸೇವೆ ಮಾಡುತ್ತಾ ಜನಸೇವೆಯನ್ನೂ ಮಾಡಬೇಕಿದ್ದ ಸಂಚಾರಿ ವಿಜಯ್ ಇಂದು ನಮ್ಮೊಡನೆ ಇಲ್ಲದೇ ಇದ್ರೂ, ಅವರ ನೆನಪು ಕನ್ನಡ ಚಿತ್ರರಂಗದ ಚರಿತ್ರೆಯ ಪುಟದಲ್ಲಿ ಸದಾ ಹಸಿರಾಗಿಯೇ ಇರಲಿದೆ.

ಇದನ್ನೂ ಓದಿ:Daredevil Mustafa: 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ

ABOUT THE AUTHOR

...view details