ಹಿಂದಿ ಚಿತ್ರರಂಗದ ಹಿರಿಯ ನಟ ಸಮೀರ್ ಖಾಖರ್ (Sameer Khakhar) ನಿಧನರಾಗಿದ್ದಾರೆ. 71ರ ಹರೆಯದ ನಟನ ನಿಧನದ ಸುದ್ದಿಯನ್ನು ಅವರ ಸಹೋದರ ಗಣೇಶ್ ಖಚಿತಪಡಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಸಮೀರ್ ಮೃತಪಟ್ಟಿದ್ದಾರೆ ಎಂದು ಇಂದು ಮಾಹಿತಿ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಉಸಿರಾಟದ ಸಮಸ್ಯೆ ಹಿನ್ನೆಲೆ ಅವರನ್ನು ಮುಂಬೈನ ಬೊರಿವಲಿಯಲ್ಲಿರುವ ಎಂಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಸಹೋದರ ಗಣೇಶ್ ಮಾಹಿತಿ.."ನಿನ್ನೆ ಬೆಳಗ್ಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ನಾವು ವೈದ್ಯರನ್ನು ಮನೆಗೆ ಕರೆಸಿದ್ದೆವು. ಅವರನ್ನು ದಾಖಲಿಸುವಂತೆ ವೈದ್ಯರು ಸೂಚಿಸಿದರು. ಈ ಹಿನ್ನೆಲೆ ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದೆವು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಯಿತು. ಅವರಿಗೆ ಬಹು ಅಂಗಾಂಗ ವೈಫಲ್ಯವಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ 4.30ಕ್ಕೆ ಅವರು ನಿಧನರಾಗಿದ್ದಾರೆ" ಎಂದು ನಟ ಸಮೀರ್ ಖಾಖರ್ ಸಹೋದರ ಗಣೇಶ್ ಮಾಹಿತಿ ನೀಡಿದರು.
ನಟನ ನಿಧನಕ್ಕೆ ಸಂತಾಪ: ಈ ಆಘಾತಕಾರಿ ಸುದ್ದಿ ತಿಳಿದ ನಂತರ ಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. "ಕೆಲವು ಕಾರಣಗಳಿಂದಾಗಿ ನುಕ್ಕಡ್‌ನಲ್ಲಿನ ಅವರ ಅಪ್ರತಿಮ ಪಾತ್ರದ ನಂತರ ನನಗೆ ಕಾಲೇಜಿನಲ್ಲಿ ಖೋಪ್ಡಿ ಎಂದು ಅಡ್ಡಹೆಸರು ಇಡಲಾಗಿತ್ತು. ಅಂದಿನ ನನ್ನ ಸ್ನೇಹಿತರು ಈಗಲೂ ನನ್ನನ್ನು ಖೋಪ್ಡಿ ಎಂದು ಕರೆಯುತ್ತಾರೆ. ಆದರೆ ಆ ನಟನಿಗೆ ಇಂದು ವಿದಾಯ ಹೇಳುವ ಸಮಯ ಬಂದಿದೆ. ಭಾವಪೂರ್ಣ ವಿದಾಯ ಸಮೀರ್ ಖಾಖರ್. ನೆನಪುಗಳಿಗೆ ಧನ್ಯವಾದಗಳು" ಎಂದು ಹನ್ಸಲ್ ಮೆಹ್ತಾ ತಿಳಿಸಿದರು. ಇವರಲ್ಲದೇ ಚಿತ್ರರಂಗದವರು, ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.