ಮುಂಬೈ: ಬಾಲಿವುಡ್ ಬಹುಬೇಡಿಕೆ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣದ ತನಿಖೆಯನ್ನು ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಈ ಹಿಂದೆ ಬಾಂದ್ರಾ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ನಂತರ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಜೂನ್‌ನಲ್ಲಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣವನ್ನು ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಅಪರಾಧ ವಿಭಾಗದ ತಂಡ ದೆಹಲಿಗೆ ತೆರಳಿ ಬಂಧಿತ ಆರೋಪಿಗಳ ವಿಚಾರಣೆ ನಡೆಸಲಿದೆ.
ಬಂಧಿತ ಆರೋಪಿಗಳು ಸಲ್ಮಾನ್ ಅವರನ್ನು ಎರಡು ಬಾರಿ ಕೊಲೆಗೈಯುವ ಉದ್ದೇಶದಿಂದ ಪನ್ವೇಲ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ಗೆ ಅತಿಕ್ರಮಣ ಮಾಡಿದ್ದರು ಎಂಬುದು ಹಿಂದಿನ ತನಿಖೆಯಿಂದ ತಿಳಿದು ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮೂವರು ಸದಸ್ಯರು ಈ ವರ್ಷದ ಜೂನ್‌ನಲ್ಲಿ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರವನ್ನು ತಲುಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಸುಕೇಶ್ ಬಹುಕೋಟಿ ವಂಚನೆ ಕೇಸ್: ಜಾಕ್ವೆಲಿನ್, ನೋರಾ ಬಳಿಕ ನಿಕ್ಕಿ ತಂಬೋಲಿ ಹೆಸರು!
ಸಲ್ಮಾನ್ ಖಾನ್ ವಿವಾದಗಳ ಮೂಲಕ ಅನೇಕ ಬಾರಿ ಸುದ್ದಿ ಆಗಿದ್ದರು. ರಾಜಸ್ಥಾನದಲ್ಲಿ ಅವರು ಕೃಷ್ಣಮೃಗ ಹತ್ಯೆ ಮಾಡಿದ್ದಾರೆ ಎಂಬ ಆರೋಪವಿದೆ. ಬಿಷ್ಣೋಯ್ ಸಮುದಾಯದವರಿಗೆ ಕೃಷ್ಣಮೃಗ ದೇವರ ಸಮಾನ. ಈ ಪ್ರಾಣಿಯನ್ನು ಸಲ್ಮಾನ್ ಖಾನ್ ಹತ್ಯೆ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕೊಲ್ಲಲು ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್ ರೂಪಿಸಿದ್ದ. ಆದರೆ ಅದು ವಿಫಲವಾಯಿತು.