ಕಿರುತೆರೆ ಬಳಿಕ ಆಪರೇಶನ್ ಅಲಮೇಲ್ಲಮ್ಮ, ಕವಲುದಾರಿ ಮುಂತಾದ ಚಿತ್ರಗಳ ಮೂಲಕ ಮನೆಮಾತಾಗಿರುವ ನಟ ರಿಷಿ ನಾಯಕರಾಗಿ ನಟಿಸುತ್ತಿರುವ ಮುಂದಿನ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಕೆ.ಎಸ್ ನಂದೀಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.
ಶೀರ್ಷಿಕೆ ಅನಾವರಣ: ಇತ್ತೀಚೆಗೆ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ಹಾಗೂ ಶೀರ್ಷಿಕೆ ಅನಾವರಣ ಸಮಾರಂಭ ನೆರವೇರಿತು. ನಟ ನೀನಾಸಂ ಸತೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲಾಪ್ ಮಾಡಿದರು ಹಾಗೂ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರಕ್ಕೆ 'ರುದ್ರ ಗರುಡ ಪುರಾಣ' ಎಂಬ ಟೈಟಲ್ ಇಡಲಾಗಿದೆ.
ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ನಟ ರಿಷಿ, ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಕವಲುದಾರಿ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ. ಹಾಗಾಗಿ, ಅದೇ ಜಾನರ್ನ ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ, ನಂದೀಶ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ಇದರಲ್ಲಿ ನಾನು ಪೊಲೀಸ್ ಅಧಿಕಾರಿಯಾದರೂ ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದೇನೆ. ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ "ಗರುಡ ಪುರಾಣ" ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರುದ್ರ. ಹಾಗಾಗಿ "ರುದ್ರ ಗರುಡ ಪುರಾಣ" ಅಂತ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಚಾಲನೆ ನೀಡಿದ ನೀನಾಸಂ ಸತೀಶ್ ಅವರಿಗೆ ಧನ್ಯವಾದ ಎಂದು ತಿಳಿಸಿದರು.