ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ನಿನ್ನೆ ರಾತ್ರಿಯಿಂದಲೇ ನೋಡುಗರಿಗೆ ಲಭ್ಯವಾಗಿದೆ. ಇಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಕಂಡು ಯಶಸ್ಸಿನ ಸೂಚನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಂತೂ ಕಾಂತಾರದ್ದೇ ಸುದ್ದಿ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ, ಸಿನಿಮಾ ರಂಗದಲ್ಲೇ ಸಾಕಷ್ಟು ಹೆಸರು ಮಾಡಿರುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೂಡ ಇದೇ ಮೊದಲ ಬಾರಿಗೆ ಚಿತ್ರದ ಬಗ್ಗೆ ಸುದೀರ್ಘವಾಗಿ ವಿಮರ್ಶೆ ಮಾಡಿದ್ದಾರೆ.
ಊರಿನ ನಾಯಕ ರಿಷಬ್ ಶೆಟ್ಟಿ ಹಾಗೂ ಅರಣ್ಯ ಅಧಿಕಾರಿ ಕಿಶೋರ್ ನಡುವಿನ ಸಂಘರ್ಷ, ಕರಾವಳಿ ಭಾಗದ ಭೂತರಾಧನೆ, ಕರಾವಳಿ ಕ್ರೀಡೆ ಕಂಬಳವನ್ನು ಕಾಂತಾರ ಸಿನಿಮಾ ಒಳಗೊಂಡಿದೆ. ದಕ್ಷಿಣ ಭಾಗದ ಸಂಸ್ಕೃತಿ ಬಿಂಬಿಸುವ ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಅಡಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
ಕಾಂತಾರ ಎಂದರೆ ಒಂದು ದಟ್ಟಾರಣ್ಯ ಎಂಬ ಅರ್ಥವಿದೆ. ಈ ಸಿನಿಮಾದಲ್ಲೂ ಕಾಡು ಸಾಕಷ್ಟು ಪ್ರಮುಖ ಪಾತ್ರ ವಹಿಸಿದೆ. ಕಾಡಿನೊಂದಿಗೆ ಬೆಸೆದುಕೊಂಡು ಬದುಕುವ ಊರಿನ ಜನರು ಒಂದು ಕಡೆ. ಕಾಡಿನಿಂದ ಒಂದು ಮರದ ತುಂಡು ಆಚೆ ಹೋಗದಂತೆ ಕಾಡಿನ ಒಂದಡಿ ಭೂಮಿಯನ್ನು ಯಾರೂ ಒತ್ತುವರಿ ಮಾಡದಂತೆ ಅರಣ್ಯವನ್ನು ಕಾಯುವ ಅರಣ್ಯಾಧಿಕಾರಿ ಮತ್ತೊಂದು ಕಡೆ.
ಇವರ ಜೊತೆಗೆ ರಾಜಕಾರಣಿಯ ಕುಕೃತ್ಯಗಳು. ಊರಿನ ಪರವಾಗಿ ಶಿವ (ರಿಷಬ್), ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುವ ಅಧಿಕಾರಿ ಮುರಳಿಧರ್ (ಕಿಶೋರ್) ಅತ್ಯದ್ಭುತ ನಟನೆ ಮಾಡಿದ್ದಾರೆ. ಅರಣ್ಯ ಭೂಮಿಯ ಒತ್ತುವರಿ, ಒಕ್ಕಲೆಬ್ಬಿಸುವಿಕೆ, ಅರಣ್ಯ ಸಂಪತ್ತಿನ ಲೂಟಿ, ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ತಿಕ್ಕಾಟ ಹೈಲೈಟ್ ಆಗಿವೆ. ಕರಾವಳಿ ಸಂಸ್ಕೃತಿಯ ಅನಾವರಣ ಈ ಸಿನಿಮಾದ ಪ್ರಮುಖ ಅಂಶ. ದೈವ, ಭೂತಾರಾಧನೆ, ಭೂತ ಕೋಲವನ್ನು ತೆರೆಮೇಲೆ ಅಮೋಘವಾಗಿ ತೋರಿಸಲಾಗಿದೆ.
ರಿಷಬ್ ಈ ಬಾರಿ ಮೇಕಿಂಗ್‌ಗೆ ಅತಿ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಚಿತ್ರದ ಪ್ರತಿ ಫ್ರೇಮ್ ಅನ್ನು ಸುಂದರವಾಗಿಸಿದ್ದಾರೆ. ಜಾತಿ ಪದ್ಧತಿ ಬಗ್ಗೆಯೂ 'ಕಾಂತಾರ' ಮಾತನಾಡುತ್ತದೆ. ಇನ್ನೂ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅತ್ಯದ್ಭುತ ನಟನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಂಗ್ರಿ ಯಂಗ್ ಮ್ಯಾನ್ ಲುಕ್‌ನಲ್ಲಿ ಹೊಸ ಥರದ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬಿದ್ದಾರೆ. ಕೆಲವೆಡೆಯಂತೂ ಯಾರೂ ಊಹಿಸಲಾರದಂತಹ ನಟನೆಯನ್ನು ಮಾಡಿದ್ದಾರೆ. ಸಪ್ತಮಿ ಗೌಡ ನಟನೆ ಕೂಡ ಉತ್ತಮವಾಗಿದೆ.
ಹೊಸ ಅವತಾರದಲ್ಲಿ ರಿಶಬ್ ಶೆಟ್ಟಿ ಅಬ್ಬರ
ಇದನ್ನೂ ಓದಿ:ಕಾಂತಾರ ನೋಡಿ ಮೆಚ್ಚಿದ ರಮ್ಯಾ, ರಿಷಬ್ ಅಪ್ಪಿಕೊಂಡು ಭಾವುಕರಾದ ರಕ್ಷಿತ್
ಇನ್ನೂ ಅರಣ್ಯ ಅಧಿಕಾರಿ ಕಿಶೋರ್ ಎಂದಿನಂತೆ ತಮ್ಮ ಪಾತ್ರಕ್ಕೆ ಪರಿಪೂರ್ಣತೆಯನ್ನು ತಂದುಕೊಟ್ಟಿದ್ದಾರೆ. ಹಾಗೆಯೇ ಅಚ್ಯುತ್ ಕುಮಾರ್ ಕೂಡ ಅದ್ಭುತ ನಟನೆ ಮೂಲಕ ಗುಂಗು ಹಿಡಿಸುತ್ತಾರೆ. ಕಿಶೋರ್ ಮತ್ತು ಅಚ್ಯುತ್ ಕುಮಾರ್ ನಟನೆಯನ್ನು ತೆರೆಮೇಲೆ ನೋಡಿ ಆಸ್ವಾದಿಸುವುದೇ ಒಂದು ಖುಷಿ. ಅಮ್ಮನಾಗಿ ಮಾನಸಿ ಸುಧೀರ್ ಇಷ್ಟವಾಗುತ್ತಾರೆ. ಆಗಾಗ ಒನ್ ಲೈನರ್ ಪಂಚಿಂಗ್ ಡೈಲಾಗ್‌ಗಳ ಮೂಲಕ ಪ್ರಕಾಶ್ ತುಮ್ಮಿನಾಡು ಸಖತ್ ಇಷ್ಟವಾಗುತ್ತಾರೆ. ದೀಪಕ್ ರೈ ಪಾಣಾಜೆ ನಟನೆ ಕೂಡ ಖುಷಿ ನೀಡುತ್ತದೆ. ಇನ್ನೂ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣವಿದೆ.