ಕರ್ನಾಟಕ

karnataka

ETV Bharat / entertainment

58ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಹಾಸ್ಯನಟ ರಂಗಾಯಣ ರಘು - ಈಟಿವಿ ಭಾರತ ಕನ್ನಡ

ಚಂದನವನದ ಖ್ಯಾತ ಹಾಸ್ಯ ನಟ ರಂಗಾಯಣ ರಘು ಅವರು 58ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

rangayana-raghu
ನಟ ರಂಗಾಯಣ ರಘು

By

Published : Apr 17, 2023, 4:05 PM IST

ಸ್ಯಾಂಡಲ್​ವುಡ್​ ಖ್ಯಾತ ಹಾಸ್ಯ ನಟ ರಂಗಾಯಣ ರಘು ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 1965 ರ ಏಪ್ರಿಲ್​ 17 ರಂದು ಜನಿಸಿದ ಇವರು 58ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈವರೆಗೆ ಹಲವಾರು ಕನ್ನಡ ಸಿನಿಮಾಗಳಲ್ಲಿ ರಂಗಾಯಣ ರಘು ಅಭಿನಯಿಸಿದ್ದಾರೆ. ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ದೊಡ್ಡಣ್ಣ, ಸಾಧುಕೋಕಿಲ ಇಂತಹ ಹಾಸ್ಯ ನಟರ ಸಾಲಿಗೆ ಇವರು ಕೂಡ ಸೇರಿದ್ದಾರೆ. ಇದಲ್ಲದೇ ರಘು ವಿಲನ್​ ಪಾತ್ರಗಳನ್ನು ಕೂಡ ಮಾಡಿದ್ದಾರೆ.

ಹೆಚ್ಚಾಗಿ ಹಾಸ್ಯ ಪಾತ್ರವನ್ನು ಮಾಡುವವರು ಅಷ್ಟು ಸುಲಭವಾಗಿ ಖಳನಾಯಕನ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ರಂಗಾಯಣ ರಘು ಇದಕ್ಕೆ ತದ್ವಿರುದ್ಧ. ಎಂತಹದ್ದೇ ಪಾತ್ರವನ್ನು ಕೊಟ್ಟರೂ ಕೂಡ ಸಲೀಸಾಗಿ ನಟಿಸಿ ಸುಲಭದಲ್ಲೇ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಇಷ್ಟು ಮಾತ್ರವಲ್ಲದೇ ರಘು ಅವರು ಮೊದಲಿನಿಂದಲೂ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ನಾಯಕ ನಟನ ಅಥವಾ ನಾಯಕಿಯ ತಂದೆಯಾಗಿ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಅದು ಎಂತಹದ್ದೇ ಪಾತ್ರ ಕೊಟ್ಟರೂ ನೀರಿನಂತೆ ಪಾತ್ರಕ್ಕೆ ಬೇಕಾದ ರೂಪವನ್ನು ಇವರು ಪಡೆಯುತ್ತಾರೆ. ಹೀಗಾಗಿಯೇ ರಘು ಚಂದನವನದ ಖ್ಯಾತ ನಟರ ಸಾಲಲ್ಲಿ ಇದ್ದಾರೆ. ಇವರ ನಟನೆಯನ್ನು ಮೆಚ್ಚಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಕರ್ನಾಟಕ ರಾಜ್ಯ ಫಿಲ್ಮ್​ ಪ್ರಶಸ್ತಿಗಳು, ಸೌತ್​ ಫಿಲ್ಮ್​ ಫೇರ್​ ಪ್ರಶಸ್ತಿ, ಉದಯ ಫಿಲ್ಮ್​ ಪ್ರಶಸ್ತಿ, ಸುವರ್ಣ ಫಿಲ್ಮ್​ ಪ್ರಶಸ್ತಿ, ದಕ್ಷಿಣ ಭಾರತ ಅಂತಾರಾಷ್ಟ್ರೀಯ ಫಿಲ್ಮ್​ ಪ್ರಶಸ್ತಿ ಹೀಗೆ ಅನೇಕ ಅವಾರ್ಡ್ಸ್​ಗಳನ್ನು ಇವರು ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ:'ರಂಗು ರಗಳೆ' ಮಾಡಲು ಸಿದ್ಧರಾದ ಸ್ಯಾಂಡಲ್​ವುಡ್​ ಯುವ ನಟರು

ರಘು ಅಭಿನಯದ ಸಿನಿಮಾಗಳು: ಕನ್ನಡದ ಹಲವು ಚಿತ್ರಗಳಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಧಮ್​, ಕೋತಿಗಳು ಸಾರ್​ ಕೋತಿಗಳು, ಸಾಹುಕಾರ, ದುನಿಯಾ, ಗಾಳಿಪಟ, ಅವ್ವ, ರಾಮ್​, ಉಲ್ಲಾಸ ಉತ್ಸಾಹ, ಚಿರು, ಸಂಜು ವೆಡ್ಸ್​ ಗೀತಾ, ಹುಡುಗರು, ಚಿಂಗಾರಿ, ಅಲೆಮಾರಿ, ಅಣ್ಣಾ ಬಾಂಡ್​, ರೋಮಿಯೋ, ಕಡ್ಡಿಪುಡಿ, ಅಗ್ರಜ, ಗಜಕೇಸರಿ, ಪವರ್​, ಅಕಿರಾ, ದೊಡ್ಮನೆ ಹುಡ್ಗ, ರಾಜಕುಮಾರ, ಪಂಚತಂತ್ರ, ಭರಾಟೆ, ಯುವರತ್ನ, ಜೇಮ್ಸ್​ ಗಾಳಿಪಟ 2 ಸೇರಿದಂತೆ ಸುಮಾರು 250 ಕ್ಕೂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಅಜ್ಞಾತವಾಸಿ'ಯಾದ ರಂಗಾಯಣ ರಘು:ಮೊದಲ ಬಾರಿಗೆ ರಂಗಾಯಣ ರಘು ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರವೇ 'ಅಜ್ಞಾತವಾಸಿ'. ಗುಲ್ಟು ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ಧನ ಚಿಕ್ಕಣ್ಣ ಮತ್ತು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕವಲು ದಾರಿ ಚಿತ್ರ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಅಜ್ಞಾತವಾಸಿ ಚಿತ್ರಕ್ಕೆ ರಂಗಾಯಣ ರಘು ಹೀರೋ ಆಗಿದ್ದಾರೆ.

ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಪಾವನಾ ಗೌಡ, ಸಿದ್ದು ಮೂಲಿಮನಿ, ಶರತ್​ ಲೋಹಿತಾಶ್ವ ಮತ್ತು ರವಿಶಂಕರ್​ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಅವರು ಪೊಲೀಸ್​ ಅಧಿಕಾರಿಯಾಗಿ ಮಿಂಚಲಿದ್ದಾರೆ. ಅದ್ವೈತ ಛಾಯಾಗ್ರಾಹಕರಾಗಿ ಮತ್ತು ಚರಣ್​ ರಾಜ್​ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರವು ಆದಷ್ಟು ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ.

ಇದನ್ನೂ ಓದಿ:'ತಾರಿಣಿ' ಮೂಲಕ ಮತ್ತೆ ಕನ್ನಡದಲ್ಲಿ ಮಮತಾ ರಾಹುತ್; ಸ್ಯಾಂಡಲ್​ವುಡ್​ಗೆ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ

ABOUT THE AUTHOR

...view details