ಕಳೆದ ವರ್ಷ ಬಾಯ್ಕಾಟ್ ಬಿಸಿ ನಡುವೆಯೂ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದ ಬ್ರಹ್ಮಾಸ್ತ್ರ ಚಿತ್ರದ ನಾಯಕ ನಟ ರಣ್ಬೀರ್ ಕಪೂರ್ ಸದ್ಯ 'ತು ಜೂಠಿ ಮೆ ಮಕ್ಕರ್' ಸಿನಿಮಾ ಬಗ್ಗೆ ಚರ್ಚೆಯಲ್ಲಿದ್ದಾರೆ. ನಟ ರಣ್ಬೀರ್ ಕಪೂರ್ ಮೊದಲ ಬಾರಿಗೆ ನಟಿ ಶ್ರದ್ಧಾ ಕಪೂರ್ ಅವರೊಂದಿಗೆ ತೆರೆ ಕಂಚಿಕೊಂಡಿದ್ದು, ಮಾರ್ಚ್ 8 ರಂದು ಚಿತ್ರ ಬಿಡುಗಡೆ ಆಗಲು ಸಜ್ಜಾಗಿದೆ. ಈ ಹಿನ್ನೆಲೆ ಚಿತ್ರತಂಡವೀಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.
ಅಭಿಮಾನಿಯ ಮೊಬೈಲ್ ಎಸೆದ ನಟ:ಬಾಲಿವುಡ್ ಬಹುಬೇಡಿಕೆ ನಟ ರಣ್ಬೀರ್ ಕಪೂರ್ ಈಗಾಗಲೇ ಚಿತ್ರದ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಪ್ರಚಾರದ ವೇಳೆ ಅಭಿಮಾನಿಯೋರ್ವರು ರಣ್ಬೀರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಅವರು ಅಭಿಮಾನಿಯ ಮೊಬೈಲ್ ತೆಗೆದುಕೊಂಡು ವಾಪಸ್ ಎಸೆದಿದ್ದಾರೆ. ರಣ್ಬೀರ್ ಕಪೂರ್ ಅವರ ಈ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಸೆಲ್ಫಿಗೆ ಒಪ್ಪಿಗೆ ಕೊಟ್ಟ ನಟ: ಈ ವೈರಲ್ ವಿಡಿಯೋದಲ್ಲಿ, ರಣ್ಬೀರ್ ಕಪೂರ್ ಸಖತ್ ಹ್ಯಾಂಡ್ಸಂ ಆಗಿ ಕಾಣಿಸಿಕೊಂಡಿದ್ದಾರೆ. ರಣ್ಬೀರ್ ನೀಲಿ ಜೀನ್ಸ್, ಬಿಳಿ ಟೀ ಶರ್ಟ್ ಮತ್ತು ಅದರ ಮೇಲೆ ಬೂದು ಬಣ್ಣದ ಜಾಕೆಟ್ ಧರಿಸಿದ್ದಾರೆ. ರಣ್ಬೀರ್ ಅಭಿಮಾನಿಯೊಬ್ಬರು ಅವರೊಂದಿಗೆ ಸೆಲ್ಫಿಗೆ ಫೋಸ್ ಕೊಡಲು ಮನವಿ ಮಾಡಿದ್ದು, ರಣ್ಬೀರ್ ಒಪ್ಪಿಗೆ ಸೂಚಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಅಭಿಮಾನಿಯ ವರ್ತನೆಗೆ ತಾಳ್ಮೆ ಕಳೆದುಕೊಂಡ ನಟ:ತಮ್ಮ ಮೆಚ್ಚಿನ ತಾರೆಯನ್ನು ಭೇಟಿ ಆದ ಹಿನ್ನೆಲೆ ಈ ಅಭಿಮಾನಿ ಸಾಕಷ್ಟು ಸಂಭ್ರಮಿಸಿದ್ದಾರೆ. ಆ ಯುವಕ ಎಷ್ಟು ಉತ್ಸುಕನಾಗಿದ್ದನೆಂದರೆ, ಒಂದಲ್ಲ ಎರಡಲ್ಲ ಮೂರು ಬಾರಿ ಮೊಬೈಲ್ ಅನ್ನು ಸೆಟ್ ಮಾಡಿದರೂ ರಣ್ಬೀರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಆಗಲಿಲ್ಲ. ಈ ಸೆಲ್ಫಿ ಸಲುವಾಗಿ ಪ್ರಚಾರಕ್ಕೆ ತಡಮಾಡುತ್ತಿದ್ದ ರಣ್ಬೀರ್ ಕಪೂರ್ ಅವರ ತಾಳ್ಮೆ ನಿಯಂತ್ರಣ ತಪ್ಪಿದೆ. ಅಭಿಮಾನಿಯ ಈ ವರ್ತನೆಯಿಂದ ಸಿಟ್ಟಿಗೆದ್ದು ಅವರ ಕೈಯಿಂದ ಫೋನ್ ತೆಗೆದುಕೊಂಡು ಅದನ್ನು ಹಿಂದಕ್ಕೆ ಎಸೆದಿದ್ದಾರೆ ನಟ ರಣ್ಬೀರ್.