ಬಹುಭಾಷಾ ನಟ, ಚಂದನವನದ ಎವರ್ಗ್ರೀನ್ ಹೀರೋ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 59ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಬ್ಯುಸಿಯಾಗಿರುವ ನಟ ರಮೇಶ್ ಅರವಿಂದ್ 1964ರ ಸೆಪ್ಟೆಂಬರ್ 10ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಗೋವಿಂದಚಾರಿ ಅರವಿಂದ್ ಮತ್ತು ಸರೋಜಾ ಅವರ ಪುತ್ರನಾಗಿ ಜನಿಸಿದರು. 1991ರಲ್ಲಿ ಅರ್ಚನಾ ಅವರನ್ನು ಮದುವೆಯಾದ ಅವರು ನಿಹಾರಿಕಾ ಮತ್ತು ಅರ್ಜುನ್ ಎಂಬ ಇಬ್ಬರು ಮಕ್ಕಳನ್ನೊಳಗೊಂಡ ಸುಂದರ ಕುಟುಂಬ ಹೊಂದಿದ್ದಾರೆ.
ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಪ್ರತಿಭಾನ್ವಿತ ನಟ. ಇದರ ಜೊತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಸೇರಿ ಒಟ್ಟು ಆರು ಭಾಷೆಗಳ ಚಿತ್ರರರಂಗದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 34 ವರ್ಷಗಳಾಗಿದ್ದು ಸುಮಾರು 140 ಸಿನಿಮಾಗಳಲ್ಲಿ ಅಭಿನಯಿಸಿರುವುದು ಹೆಮ್ಮೆಯ ವಿಷಯ. ಕಿರುತೆರೆಯಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಶೋ ನಿರೂಪಿಸಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಸಾಧಕರನ್ನು ಪರಿಚಯಿಸುವ ಈ ಶೋ ಭಾರಿ ಜನಮೆಚ್ಚುಗೆ ಪಡೆದುಕೊಂಡಿತು. ಇದಲ್ಲದೇ ಹಲವು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ವೃತ್ತಿ ಜೀವನಕ್ಕೆ ಕಾಲಿಟ್ಟು ಸತಿ ಲೀಲಾವತಿ, ಡ್ಯುಎಟ್, ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಆಪ್ತಮಿತ್ರ, ಉಲ್ಟಾ ಪಲ್ಟಾ, ಹೂಮಳೆ, ಚಂದ್ರಮುಖಿ ಪ್ರಾಣಸಖಿ, ರಾಮ ಶಾಮ ಭಾಮ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಶಿವಾಜಿ ಸುರತ್ಕಲ್, ಅನುರಾಗ ಸಂಗಮ ಮತ್ತು ಅಮೃತವರ್ಷಿಣಿ ಅಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗನ್ನು ಮುಡಿಗೇರಿಸಿಕೊಂಡಿದ್ದಾರೆ.