ನಿರ್ಮಾಪಕ ಗುನೀತ್ ಮೊಂಗಾ ಮತ್ತು ಶೌನಕ್ ಸೇನ್ ಅವರ ನಂತರ ಆರ್‌ಆರ್‌ಆರ್ ಸಿನಿಮಾ ಸ್ಟಾರ್ ರಾಮ್ ಚರಣ್ ಮಾರ್ಚ್ 12ರಂದು ನಡೆಯಲಿರುವ 95ನೇ ಅಕಾಡೆಮಿ ಪ್ರಶಸ್ತಿ ಸಲುವಾಗಿ ಯನೈಟೆಡ್ ಸ್ಟೇಟ್ಸ್ (ಯುಎಸ್)ಗೆ ತೆರಳಿದ್ದಾರೆ. ಇಂದು ರಾಮ್ ಚರಣ್ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬರಿಗಾಲಲ್ಲೇ ನಡೆದಾಡಿದ ದೃಶ್ಯಗಳು ದೊರೆತಿವೆ.
ಈ ವರ್ಷದ ಆರಂಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆರ್‌ಆರ್‌ಆರ್ ಚಿತ್ರತಂಡದ ಕಣ್ಣು ಇದೀಗ ಆಸ್ಕರ್ ಮೇಲಿದೆ. ಪ್ರತಿಷ್ಟಿತ ಪ್ರಶಸ್ತಿ ಸಲುವಾಗಿ ರಾಮ್ಚರಣ್ ಅಮೆರಿಕಕ್ಕೆ ಪ್ರಯಾಣಿಸಿದ್ದು, ಫೋಟೋಗ್ರಾಫರ್‌ಗಳು ದೃಶ್ಯ ಸೆರೆ ಹಿಡಿದಿದ್ದಾರೆ. ಲಭ್ಯವಾದ ಚಿತ್ರಗಳಲ್ಲಿ ರಾಮ್ ಚರಣ್ ವಿಮಾನ ನಿಲ್ದಾಣದಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವುದನ್ನು ನೋಡಬಹುದು.
ವರದಿಗಳ ಪ್ರಕಾರ, ರಾಮ್ ಚರಣ್ ಅಯ್ಯಪ್ಪ ಮಾಲೆ ಧರಿಸಿದ್ದಾರೆ. ಹೀಗಾಗಿ ಅವರು ಕಪ್ಪು ಉಡುಗೆ ಮತ್ತು ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಮೊದಲು ಅಯ್ಯಪ್ಪ ಭಕ್ತರು ಅನುಸರಿಸುವ ಕಡ್ಡಾಯ ಆಚರಣೆ ಇದು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅವರ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಮೆಚ್ಚಿನ ನಟನನ್ನು ಹಾಡಿ ಹೊಗಳುತ್ತಿದ್ದಾರೆ. "ಆರ್‌ಆರ್‌ಆರ್ ತಂಡಕ್ಕೆ ಆಲ್ ದಿ ಬೆಸ್ಟ್. ಟ್ರೋಫಿ ಪಡೆಯಿರಿ" ಎಂದೆಲ್ಲಾ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
2009ರಲ್ಲಿ ಭಾರತ ಕೊನೆಯ ಬಾರಿಗೆ ಚಲನಚಿತ್ರದ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು. ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರು ಡ್ಯಾನಿ ಬೋಯ್ಲ್ ನಿರ್ದೇಶನದ ಸ್ಲಮ್‌ಡಾಗ್ ಮಿಲಿಯನೇರ್ (2008) ಚಿತ್ರದ ಜೈ ಹೋ ಹಾಡಿಗೆ ಅತ್ಯುತ್ತಮ ಮೂಲ ಹಾಡು ಪ್ರಶಸ್ತಿ ಪಡೆದಿದ್ದರು. ಇದೀಗ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಅಂಗಳದಲ್ಲಿದೆ.