ತಮ್ಮ ಮುಂದಿನ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ಕುರಿತು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಹೊಸ ಅಪ್ಡೇಟ್ ನೀಡಿದ್ದರು. ಇದೀಗ ಸಿನಿಮಾ ತಂಡ ಮತ್ತೊಂದು ಸುದ್ದಿ ಕೊಟ್ಟಿದೆ. ವಿನೂತನ ಪ್ರಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಇದು ಹೊಸತೆಂದು ಹೇಳಲಾಗುತ್ತಿದೆ.
ಚಾರ್ಲಿ 777 ಬಳಿಕ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಚಿತ್ರವೇ ಸಪ್ತ ಸಾಗರದಾಚೆ ಎಲ್ಲೋ. ಪೋಸ್ಟರ್ ಹಾಗು ಹಾಡುಗಳಿಂದ ಚಿತ್ರರಂಗದಲ್ಲಿ ಟಾಕ್ ಆಗುತ್ತಿದೆ. ಇದುವರೆಗೆ ಯಾರೂ ಮಾಡದೇ ಇರುವಂತಹ ಹೊಸ ಪ್ರಯೋಗವನ್ನು ಚಿತ್ರತಂಡ ಮಾಡೋಕೆ ಹೊರಟಿದೆ. ಸಾಮಾನ್ಯವಾಗಿ ಚಿತ್ರಗಳು ರಿಲೀಸ್ ಆಗಿ ಹಿಟ್ ಆಗುತ್ತಿದ್ದಂತೆ ಅದರ ಸೀಕ್ವೆಲ್ ಘೋಷಣೆಯಾಗುತ್ತದೆ. ನಂತರ ಚಿತ್ರೀಕರಣ ಮುಗಿಸಿ, ಒಂದೋ ಎರಡೋ ಅಥವಾ ಮೂರು ವರ್ಷಗಳ ನಂತರ ಎರಡನೇ ಭಾಗ ತೆರೆಗೆ ಬರುತ್ತದೆ. ಇದಕ್ಕೂ ಮಿಗಿಲಾಗಿ ಚಿತ್ರ ಘೋಷಣೆಯಾಗುತ್ತಿದ್ದಂತೆ ಸೀಕ್ವೆಲ್ ಬಗ್ಗೆ ಹೇಳಿ, ಮೊದಲ ಭಾಗ ರಿಲೀಸ್ ಆದ ನಂತರ ಕನಿಷ್ಠ ವರ್ಷದ ನಂತರ ಸೀಕ್ವೆಲ್ ರಿಲೀಸ್ ಮಾಡಲಾಗುತ್ತದೆ.
ಆದರೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತಂಡ ಸಿನಿಮಾ ಘೋಷಣೆಯಾದಾಗ ಯಾವುದೇ ಸೀಕ್ವೆಲ್ ಸುಳಿವು ನೀಡಿರಲಿಲ್ಲ. ಆದರೆ ಸಿನಿಮಾ ಚಿತ್ರೀಕರಣ ಮುಗಿಸಿರುವ ಮಾಹಿತಿ ನೀಡುವಾಗಲೇ ಸೀಕ್ವೆಲ್ ಬಗ್ಗೆ ಹೇಳುವುದಲ್ಲದೆ, ಆ ಸೀಕ್ವೆಲ್ ಚಿತ್ರೀಕರಣವನ್ನೂ ಮುಗಿಸಿರುವ ಆಶ್ಚರ್ಯಕರ ಸಂಗತಿ ಬಯಲು ಮಾಡಿತ್ತು. ನಿರ್ದೇಶಕ ಹೇಮಂತ್ ಎಂ. ರಾವ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾದ ಸೈಡ್ ಎ ಸೆಪ್ಟೆಂಬರ್ 1ರಂದು ತೆರೆಗೆ ಬಂದರೆ, ಸೈಡ್ B ಒಂದು ತಿಂಗಳ ಅಂತರದಲ್ಲಿ ಅಂದರೆ ಅಕ್ಟೋಬರ್ 20 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅತ್ಯಂತ ಸಣ್ಣ ಅಂತರದಲ್ಲಿ ಸೀಕ್ವೆಲ್ ರಿಲೀಸ್ ಮಾಡುತ್ತಿರುವುದು ಇದೇ ಮೊದಲು.