ಬಣ್ಣದ ಲೋಕಕ್ಕೆ ಸಿಂಪಲ್ಲಾಗಿ ಎಂಟ್ರಿ ಕೊಟ್ಟು ಸಿಂಪಲ್ ಸ್ಟಾರ್ ಆದ ನಟ ರಕ್ಷಿತ್ ಶೆಟ್ಟಿ. ಪ್ರತಿ ಬಾರಿಯೂ ವಿಭಿನ್ನ ಕಥೆಗಳನ್ನು ಆಯ್ದುಕೊಂಡು ಸಿನಿಮಾ ಮಾಡಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಿಂಪಲ್ ಆಗಿರುವ ಸ್ಟೋರಿಯನ್ನು ಪ್ರೇಕ್ಷಕರ ಮನಮುಟ್ಟುವಂತೆ ತೋರಿಸುವ ರಕ್ಷಿತ್ ಸ್ಟೈಲ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ, ಈ ಬೆಳ್ಳಿ ಪರದೆಯಲ್ಲಿ ಯಶಸ್ಸು ಸಿಗೋದು ಅಷ್ಟು ಸುಲಭವಲ್ಲ. ಅದನ್ನು ಪಡೆದುಕೊಳ್ಳಲು ಸಾಕಷ್ಟು ಛಲ, ಪರಿಶ್ರಮ ಬೇಕು. ರಕ್ಷಿತ್ ಶೆಟ್ಟಿ ಅವರ ಜೀವನವೂ ಇದಕ್ಕೆ ಹೊರತಾಗಿಲ್ಲ. ಸಿನಿಮಾ ಎಂಬ ಜಂಜಾಟದಲ್ಲಿ ಸಾಕಷ್ಟು ಸೋಲು, ನೋವುಗಳನ್ನು ಕಂಡಿದ್ದಾರೆ.
ಈ ಬಗ್ಗೆ ಅವರಿಂದು ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಗುರುಪೂರ್ಣಿಮೆ ಶುಭಾಶಯಗಳನ್ನು ತಿಳಿಸುತ್ತಾ ತಾವು ನಡೆದು ಬಂದ ದಾರಿ ಮತ್ತು ಮುಂದೆ ತುಳಿಯಬೇಕಿರುವ ಹಾದಿಯ ಬಗ್ಗೆ ಮಾತನಾಡಿದ್ದಾರೆ. ರಕ್ಷಿತ್ ಶೆಟ್ಟಿ ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ. ಸಿನಿಮಾ ಎಂಬ ಕನಸು ಹುಟ್ಟಿಕೊಳ್ಳಲು ಉಡುಪಿಯೇ ಕಾರಣ ಎಂದು ಬಹಿರಂಗಪಡಿಸಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾದಲ್ಲಿ ನಿರ್ದೇಶಕರ ಕುರ್ಚಿಯಲ್ಲಿ ಕುಳಿತಿದ್ದ ಶೆಟ್ರು, ಇದೀಗ ದಶಕದ ಬಳಿಕ ಮತ್ತೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಪ್ರಮುಖವಾಗಿ ಈ ವಿಚಾರವನ್ನು ತಿಳಿಸಲೆಂದೇ ತಮ್ಮ ಕಥಾ ಪ್ರಪಂಚಕ್ಕೆ ನಮ್ಮೆಲ್ಲರನ್ನೂ ಆಹ್ವಾನಿಸಿದ್ದಾರೆ.
ಜೊತೆಗೆ ಬಾಲ್ಯದ ದಿನಗಳಲ್ಲಿ ಉಡುಪಿಯ ರಥಬೀದಿ, ಶ್ರೀ ಕೃಷ್ಣ, ರಾಘವೇಂದ್ರ ಅನಂತೇಶ್ವರನ ಸನ್ನಿಧಿಯ ಓಡಾಟದ ಬಗ್ಗೆ ಕ್ಯಾಪ್ಶನ್ ಬರೆದಿದ್ದಾರೆ. ಅದನ್ನು ಸ್ಟೋರಿ ಕೂಡ ಹಾಕಿಕೊಂಡಿದ್ದಾರೆ. ಅನಂತೇಶ್ವರನ ಸನ್ನಿಧಿಯಲ್ಲಿ ತನಗೆ ಕಾಡಿದ ಪ್ರಶ್ನೆಗಳು, ಅದರಿಂದ ತನ್ನೊಳಗೊಬ್ಬ ಕಥೆಗಾರ ಹುಟ್ಟಿದ ಬಗೆಯನ್ನು ಬರೆದುಕೊಂಡಿದ್ದಾರೆ. ಇದೇ ಪಯಣದಲ್ಲಿ ತಿಳಿದುಕೊಂಡ ಪುರಾಣ, ಇತಿಹಾಸ, ಅದರಿಂದ ಕಂಡುಕೊಂಡ ವಿಜ್ಞಾನ, ಈ ಇತಿಹಾಸದಿಂದ ಅಳವಡಿಸಿಕೊಂಡ ಆಧುನಿಕ ಕಥೆಗಳ ಸರಣಿಯನ್ನು ಜನರಿಗೆ ತಿಳಿಸಲು ರಕ್ಷಿತ್ ಶೆಟ್ಟಿ ಹೊರಟಿದ್ದಾರೆ. ಇದರ ಹೆಸರೇ 'ನಾ ಕಂಡಂತೆ'.