ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟರಾದರು. ಅದಾದ ಬಳಿಕ ಚಾರ್ಲಿ 777 ಸಿನಿಮಾ ಅವರನ್ನು ಸೂಪರ್ ಸ್ಟಾರ್ ಆಗಿ ಮಾಡಿತು. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ' ಇದೀಗ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಕುರಿತು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದಾರೆ.
'137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ' ಎಂದು ಚಿತ್ರೀಕರಣದ ವಿಡಿಯೋವನ್ನು ಹಂಚಿಕೊಂಡಿರುವ ನಟ ಶೂಟಿಂಗ್ ಮುಗಿದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ಚಿತ್ರ ಮಂದಿರದಲ್ಲಿ ಸಪ್ತ ಸಾಗರದ ಅಲೆ ಪ್ರಾರಂಭವಾದಾಗ ನೀವು ನಿಮ್ಮ ಪಾತ್ರರೊಂದಿಗೆ ಚಿತ್ರ ವೀಕ್ಷಿಸುವಿರಿ ಎಂಬ ಭರವಸೆ ಇದೆ' ಎಂದು ಬರೆದುಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಈಗಾಗಲೇ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಂತರ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್ ಮತ್ತು ಸಂಗೀತ ನಿರ್ದೇಶಕ ಚರಣ್ ರಾಜ್ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಮತ್ತೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಚಿತ್ರ ಮೊದಲ ಟೀಸರ್ನಿಂದಲೇ ಹೆಚ್ಚು ಪ್ರೇಕ್ಷಕರನ್ನು ಸೆಳೆದಿದೆ. ರಕ್ಷಿತ್ ಜೊತೆ ನಾಯಕಿಯಾಗಿ ರುಕ್ಮಿಣಿ ವಸಂತ ನಟಿಸುತ್ತಿದ್ದು, ಚಿತ್ರದಲ್ಲಿ ಸುಂದರ ಪ್ರೇಮ ಕಥೆ ಇರುವುದು ಪೋಸ್ಟರ್ಗಳಿಂದಲೇ ತಿಳಿಯುತ್ತಿದೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.