ಜೈಲರ್ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದರು. ಲಕ್ನೋದಲ್ಲಿ ಭೇಟಿ ಸಂದರ್ಭ ಈ ಹಿರಿಯ ನಟ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪಾದ ಸ್ಪರ್ಶಿಸಿ ನಮನ ಸಲ್ಲಿಸಿದ್ದು, ಚರ್ಚೆ ಹುಟ್ಟುಹಾಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಗ್ಗೆ ಸ್ವತಃ ನಟ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.
ನಟ ರಜನಿಕಾಂತ್ ಸ್ಪಷ್ಟನೆ: ಚೆನ್ನೈಗೆ ಮರಳುತ್ತಿದ್ದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪಾದ ಮುಟ್ಟಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಯೋಗಿಗಳು ಅಥವಾ ಸನ್ಯಾಸಿಗಳ ಪಾದ ಸ್ಪರ್ಶಿಸುವುದು ನನ್ನ ಅಭ್ಯಾಸ ಎಂದು ಸ್ಪಷ್ಟನೆ ನೀಡಿದರು. ''ಯೋಗಿಗಳು ಅಥವಾ ಸನ್ಯಾಸಿಗಳು ನನಗಿಂತ ಚಿಕ್ಕವರಾಗಿದ್ದರೂ ಕೂಡ ಅವರ ಪಾದ ಸ್ಪರ್ಶಿಸಿ ಆಶೀರ್ವಾದ ಕೇಳುತ್ತೇನೆ'' ಎಂದು ಮಾಧ್ಯಮದವರಲ್ಲಿ ತಿಳಿಸಿದರು.
ಆಧ್ಯಾತ್ಮಿಕ ಪ್ರವಾಸ ಪೂರ್ಣಗೊಳಿಸಿದ ನಟ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಟ ರಜನಿಕಾಂತ್ ಜೊತೆಗಿನ ಫೋಟೋ ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಯಿತು. ''ಇಂದು ಲಕ್ನೋದಲ್ಲಿರುವ ನನ್ನ ಅಧಿಕೃತ ನಿವಾಸದಲ್ಲಿ ಜನಪ್ರಿಯ ಚಲನಚಿತ್ರ ನಟ ರಜನಿಕಾಂತ್ ಅವರೊಂದಿಗೆ ಸೌಜನ್ಯಯುತ ಭೇಟಿ'' ಎಂದು ಬರೆದುಕೊಂಡಿದ್ದರು. ಜೈಲರ್ ಬಿಡುಗಡೆಗೂ ಮುನ್ನ ಆಧ್ಯಾತ್ಮಿಕ ಪ್ರವಾಸ ಪ್ರಾರಂಭಿಸಿದ್ದ ನಟ ಕಳೆದ ಶುಕ್ರವಾರ, ಶನಿವಾರ, ಭಾನುವಾರದಂದು ಉತ್ತರ ಪ್ರದೇಶದ ಗಣ್ಯರನ್ನು ಭೇಟಿಯಾಗಿದ್ದಾರೆ.