ವಿಜಯವಾಡ, ಆಂಧ್ರಪ್ರದೇಶ:ಜನಪ್ರಿಯ ನಾಯಕ ರಜನಿಕಾಂತ್ ಅಭಿಮಾನಿಗಳು ವೈಎಸ್‌ಆರ್‌ಸಿಪಿ ನಾಯಕರ ಕ್ಷಮೆಯಾಚಿಸಬೇಕೆಂದು ಟ್ವಿಟರ್‌ನಲ್ಲಿ ಒತ್ತಾಯಿಸುತ್ತಿದ್ದಾರೆ. ರಜನಿಕಾಂತ್ ಅವರನ್ನು ಟೀಕಿಸಿದವರ ಮೇಲೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ #YSRCPApologizeRajini ಹ್ಯಾಶ್‌ಟ್ಯಾಗ್‌ನೊಂದಿಗೆ ಕಾಮೆಂಟ್‌ಗಳ ಜೊತೆಗೆ ಮೀಮ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈ ಹ್ಯಾಶ್‌ಟ್ಯಾಗ್ ಕೆಲವೇ ಕ್ಷಣಗಳಲ್ಲಿ ಟ್ರೆಂಡಿಂಗ್ ಆಗಿತ್ತು.
ಶುಕ್ರವಾರ ವಿಜಯವಾಡದ ವೇದಿಕೆಯಲ್ಲಿ ಎನ್‌ಟಿಆರ್ 100ನೇ ಜನ್ಮ ವಾರ್ಷಿಕೋತ್ಸವದ ಸಂಭ್ರಮಾಚರಣೆ ನಡೆದಿದ್ದು ಗೊತ್ತೇ ಇದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ರಜನಿಕಾಂತ್ ಅವರನ್ನು ನಂದಮೂರಿ ತಾರಕ ರಾಮರಾವ್ ಅವರ ಪುತ್ರ ಹಾಗೂ ಟಾಲಿವುಡ್ ಖ್ಯಾತ ನಟ ಎನ್. ಬಾಲಕೃಷ್ಣ ಅವರು ಇಲ್ಲಿನ ಗನ್ನವರಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಜನಿಕಾಂತ್ ಅವರು ಎನ್‌ಟಿಆರ್, ಆಂಧ್ರದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಚಂದ್ರಬಾಬು ಅವರನ್ನು 30 ವರ್ಷಗಳಿಂದ ಬಲ್ಲ ರಜನಿಕಾಂತ್ ಅವರು ಸುದೀರ್ಘ ಭಾಷಣ ಮಾಡಿದರು. ಆ ರೀತಿ ಮಾತನಾಡಿದ್ದಕ್ಕೆ ಎಪಿ ಸಚಿವರಾದ ರೋಜಾ, ಅಂಬಟಿ ರಾಂಬಾಬು, ಗುಡಿವಾಡ ಶಾಸಕ ಕೊಡಲಿ ನಾನಿ ಮುಂತಾದವರು ತೀವ್ರವಾಗಿ ಟೀಕಿಸಿದರು. ರಜನಿ ಅವರಿಗೆ ರಾಜಕೀಯದ ಬಗ್ಗೆ ಮಾತನಾಡುವ ಹಕ್ಕಿಲ್ಲ, ಅವರು ತಮಿಳುನಾಡಿನಲ್ಲಿ ಹೀರೋ ಆಗಿರಬಹುದು, ಆದರೆ ಇಲ್ಲಿ ಅಲ್ಲ, ಪಕ್ಕದ ರಾಜ್ಯದಿಂದ ಬಂದು ನೈತಿಕತೆಯ ಬಗ್ಗೆ ಮಾತನಾಡಿದರೆ ಅವರ ಮಾತು ಕೇಳುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಕಮೆಂಟ್ ಮಾಡಿದ್ದರು.