ಕಿರುತೆರೆ ಮತ್ತು ಹಿರಿತೆರೆ ಮೂಲಕ ಇನ್ನೂ ಸಾಕಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ತಮ್ಮ ಕೊಡುಗೆ ನೀಡಬೇಕಿದ್ದ ಯುವ ನಟ ಸಂಪತ್ ಜಯರಾಮ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಇದೀಗ ಅವರ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಸಂಪತ್ ತಮ್ಮ ಪತ್ನಿ ಜೊತೆ ಜಗಳ ಮಾಡಿಕೊಂಡು ಅವರನ್ನು ಸಾಯಿಸಲು ಹೋಗಿ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯೇ ಅವರ ಸಾವಿಗೆ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಕಿರುತೆರೆ ನಟ ಹಾಗೂ ಸಂಪತ್ ಅವರ ಗೆಳೆಯ ರಾಜೇಶ್ ಧ್ರುವ ಮುಕ್ತವಾಗಿ ಮಾತನಾಡಿದ್ದಾರೆ.
ಸಂಪತ್ ಜಯರಾಮ್ ಮೂಲತಃ ಮಲೆನಾಡಿನ ಪ್ರತಿಭೆ. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸಂಪತ್ ತಮ್ಮ ಕೆರಿಯರ್ ಅನ್ನು ಶುರು ಮಾಡಿದ್ದರು. ಅಷ್ಟೇ ಅಲ್ಲ, ಕೆಲ ಸಿನಿಮಾಗಳಲ್ಲಿ ಸಂಪತ್ ಅಭಿನಯಿಸಿದ್ದರು. ಇತ್ತೀಚೆಗೆ ರಾಜೇಶ್ ಧ್ರುವ ಜೊತೆ ಶ್ರೀ ಬಾಲಾಜಿ ಸ್ಟುಡಿಯೋ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಸಂಪತ್ ಜಯರಾಮ್ ಸಾವಿನ ಬಗ್ಗೆ ಹಬ್ಬುತ್ತಿರುವ ಸುದ್ದಿಗಳ ಬಗ್ಗೆ ರಾಜೇಶ್ ಧ್ರುವ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಾಜೇಶ್ ಧ್ರುವ ಹೇಳಿದ್ದೇನು?: "ಹೌದು, ಮೊನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ನನಗೆ ಕರೆ ಬರುತ್ತೆ. ನಾನು ಕೂಡ ನಿದ್ರೆಯಲ್ಲಿದ್ದೆ. ಫೋನ್ ಸೈಲೆಂಟ್‌ನಲ್ಲಿ ಇರಲಿಲ್ಲ, ಹಾಗಾಗಿ ರಿಂಗ್ ಆಗಿದ್ದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್ ಅಂತ ಹೇಳಿದರು. ಎದ್ದೋ ಬಿದ್ನೋ ಅಂತ ಓಡಿ ಹೋದೆ. ಅಷ್ಟರಲ್ಲಿ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಅಂತ ವಿಚಾರಿಸಿದಾಗ ಅಲ್ಲಿ ಬಂದಂತ ಕಾಮನ್ ಉತ್ತರ ಹೀಗಿತ್ತು."
"ಇತ್ತೀಚಿಗೆ ಅವನು ಮದುವೆ ಮಾಡಿಕೊಂಡಿದ್ದ. ಒಂದು ವರ್ಷ ಕೂಡ ಆಗಿರಲಿಲ್ಲ. ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ, ಇಂಟರ್ ಕಾಸ್ಟ್ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಸಾಗಿಸುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ ಮಾಡಿಕೊಟ್ಟಿದ್ದು. ಅವರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುವೆ. ಅವರ ಲವ್ ಸ್ಟೋರಿ ಪ್ರತಿಯೊಂದು ನನಗೆ ಗೊತ್ತು."
"ಇನ್ನು ಸಂಪತ್ ಹೇಗೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು. ಆತ ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ. ಏಕೆಂದರೆ ಸಂಪತ್ ಅವರ ತಪ್ಪು ನಿರ್ಧಾರ ತೆಗೆದುಕೊಳ್ಳುವ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಅವರಿಗೆ ಆರ್ಥಿಕ ಸಮಸ್ಯೆ ಇತ್ತು. ಆದರೆ ಗಂಡ ಹೆಂಡತಿ ನೆಮ್ಮದಿಯಾಗಿ ಇರಲಿಲ್ಲ, ಅವಕಾಶ ಸಿಗಲಿಲ್ಲ, ಹೀಗಾಗಿ ಡಿಪ್ರೆಶನ್‌ನಲ್ಲಿದ್ದರು ಅಂತೆಲ್ಲಾ ಹೇಳಿರುವ ವಿಡಿಯೋ ಹರಿದಾಡುತ್ತಿದೆ. ಚಾನ್ಸ್ ಇರಲಿಲ್ಲ ನಿಜ, ಆದರೆ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್ ಸೃಷ್ಠಿ ಮಾಡಿಕೊಳ್ಳುತ್ತಿದ್ವಿ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಅವನಲ್ಲಿ ಇತ್ತು."
"‘ಅಗ್ನಿಸಾಕ್ಷಿ’ ಧಾರಾವಾಹಿ ನೋಡಿ ಅನೇಕರು ಆತನ ನಟನೆ ಮೆಚ್ಚಿಕೊಂಡಿದ್ದರು. ಸಂಪತ್ ಎಂದಿಗೂ ಸೋಲು ಒಪ್ಪಿಕೊಳ್ಳುತ್ತಿರಲಿಲ್ಲ, ತುಂಬಾ ಪ್ರಯತ್ನ ಮಾಡುತ್ತಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಪರಿಣಾಮ ಬೀರಿದೆ. ದಯವಿಟ್ಟು ಕೆಟ್ಟ ಗಾಸಿಪ್ ಮಾಡಬೇಡಿ. ಗಂಡ, ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ, ಹಾಗೆ ಹೀಗೆ ಎಂದು ಹೆದರಿಸಿದ್ದಾನೆ. ಆಗ ಕುತ್ತಿಗೆ ಲಾಕ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೀಗೆ ಮಾಡಿರೋದು ಅಲ್ಲ, ಹೆದರಿಸಲು ಹೋಗಿ ಅಚಾನಕ್ ಸಂಪತ್ ಜಯರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" ಎಂದು ನಟ ರಾಜೇಶ್ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆಗೆ ಶರಣಾದ 'ಅಗ್ನಿಸಾಕ್ಷಿ' ನಟ