ಚಂದನವನಕ್ಕೆ ಪ್ರತಿಭಾನ್ವಿತರ ಆಗಮನವಾಗುತ್ತಿದೆ. ವಿಭಿನ್ನ ಕಂಟೆಂಟ್ ಮತ್ತು ಹೊಸ ಬಗೆಯ ಸಿನಿಮಾಗಳು ಮೂಡಿಬರುತ್ತಿವೆ. ಈ ಸಾಲಿನಲ್ಲಿ 'ರಣಾಕ್ಷ' ಚಿತ್ರತಂಡ ಕೂಡ ಒಂದು. ಯುವ ಪ್ರತಿಭೆಗಳ ತಂಡವೇ ಸೇರಿ ಮಾಡಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಆಧರಿಸಿರುವ ರಣಾಕ್ಷ ಚಿತ್ರಕ್ಕೆ ಸಾಹಿತಿ, ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಬೆಂಬಲ ಸೂಚಿಸಿದ್ದಾರೆ. ಚಿತ್ರದ ಹಾಡುಗಳು ಹಾಗೂ ಟೀಸರ್ ಅನ್ನು ನಾಗೇಂದ್ರ ಪ್ರಸಾದ್ ಅನಾವರಣಗೊಳಿಸಿ, ಮೆಚ್ಚುಗೆ ಸೂಚಿಸಿದ್ದಾರೆ.
ಕಾಮಿಡಿ ಕಿಲಾಡಿ ಮೂಲಕ ಜನರ ಗಮನ ಸೆಳೆದ ಸೀರುಂಡೆ ರಘು ಹಾಗೂ ರಕ್ಷಾ ಮುಖ್ಯಭೂಮಿಕೆಯಲ್ಲಿರುವ 'ರಣಾಕ್ಷ' ಟೀಸರ್ ಅನಾವರಣಗೊಳಿಸಿ ಮಾತನಾಡಿದ ವಿ.ನಾಗೇಂದ್ರ ಪ್ರಸಾದ್, "ನಿರ್ದೇಶಕ ರಾಘವ ಅವರು ನನಗೆ ಬಹಳ ವರ್ಷದ ಗೆಳೆಯ. ನಾನು ಈ ಚಿತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡು ಇಲ್ಲಿಗೆ ಬಂದಿರಲಿಲ್ಲ. ಆದರೆ ಟೀಸರ್ ಹಾಗೂ ಹಾಡುಗಳನ್ನು ನೋಡಿದ ಮೇಲೆ ತಂಡದ ಶ್ರಮ ಕಾಣುತ್ತದೆ. ಸಿನಿಮಾದ ಶೀರ್ಷಿಕೆಯೇ ಸಖತ್ ಸ್ಟ್ರಾಂಗ್ ಇದೆ".
"ಮೊದಲೆಲ್ಲಾ ಸಿನಿಮಾಗಳು ಹೆಚ್ಚು ಇರಲಿಲ್ಲ. ಹಾಡುಗಳು ಕೂಡ ಕಮ್ಮಿ ಇತ್ತು. ಪದೇ ಪದೇ ಅದೇ ಹಾಡನ್ನು ಆಕಾಶವಾಣಿ ಹಾಗೂ ಸಮಾರಂಭಗಳಲ್ಲಿ ಕೇಳಿದಾಗ ಅವು ಸದಾ ನೆನಪಿಗೆ ಬರುತ್ತಿತ್ತು. ಆದ್ರೀಗ ವರ್ಷಕ್ಕೆ ಸುಮಾರು 300 ಚಿತ್ರಗಳು ಬರುತ್ತಿವೆ. ಇನ್ನು ಎಷ್ಟು ಹಾಡುಗಳು ಬಂದಿರಬೇಕು ಯೋಚಿಸಿ. ಅದರಲ್ಲೂಈ ಚಿತ್ರದ ಹಾಡುಗಳು ನೋಡಿದಾಗ ಬಹಳ ಖುಷಿ ಎನಿಸಿತು. ನೋಡಿದ ಮೂರು ಹಾಡುಗಳೂ ಹೊಸತನದ ಸದ್ದು ಮಾಡುತ್ತಿದೆ. ಸಂಗೀತ ನಿರ್ದೇಶಕ ವಿಶಾಲ್ ಅಲಾಪ್ ಕೆಲಸ ಸೊಗಸಾಗಿದೆ. ಅದೇ ರೀತಿ ಗಾಯಕರಿಗೂ ಕೂಡ ಉತ್ತಮ ಭವಿಷ್ಯವಿದೆ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಿರ್ದೇಶಕ ರಾಘವ ಮಾತನಾಡಿ, "ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆ. ಯಾವುದೇ ಮಂತ್ರ- ತಂತ್ರ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು. ಅದು ಹೇಗೆ? ಏನು? ಎಂಬುದನ್ನು ಈ ಚಿತ್ರದಲ್ಲಿ ನೋಡಬೇಕು" ಅಂತಾ ತಿಳಿಸಿದರು.
ಬಳಿಕ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಜನರ ಗಮನ ಸೆಳೆದ ಪ್ರತಿಭೆ, ನಾಯಕ ಸೀರುಂಡೆ ರಘು ಮಾತನಾಡುತ್ತಾ, "ನಾನು ಕೂಡ ಮಾಧ್ಯಮದಲ್ಲಿ ಕ್ಯಾಮರಾ ಟ್ರೈಪಾಡ್ ಹಿಡಿದುಕೊಂಡು ಬಂದವನು. ನಂತರ ಕಾಮಿಡಿ ಕಿಲಾಡಿಯಲ್ಲಿ ಕಾಣಿಸಿಕೊಂಡೆ. ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಹೀರೋ ಅನ್ನುವುದಕ್ಕಿಂತ ಕಥಾ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದೇನೆ".