ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಪ್ರತಿಭಾನ್ವಿತ ನಿರ್ದೇಶಕರು ಹಾಗು ಯುವ ಕಲಾವಿದರ ಆಗಮನವಾಗುತ್ತಿದೆ. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ತಯಾರಾಗಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ತಾರಾಗಣ, ಕಂಟೆಂಟ್, ಕ್ವಾಲಿಟಿ, ಟೀಸರ್ ಹಾಗೂ ಹಾಡಿನ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಶೀರ್ಷಿಕೆಯಿಂದಲೇ ಟಾಕ್ ಆಗುತ್ತಿರುವ ಹೊಂದಿಸಿ ಬರೆಯಿರಿ ಸಿನಿಮಾ ಬಿಡುಗಡೆ ದಿನಾಂಕವನ್ನು ಇದೀಗ ಚಿತ್ರತಂಡ ಘೋಷಿಸಿದೆ. ಹೌದು ನವೆಂಬರ್ 18ಕ್ಕೆ ಹೊಂದಿಸಿ ಬರೆಯಿರಿ ಸಿನಿಮಾ ರಾಜ್ಯಾದ್ಯಂತ ದರ್ಶನ ಕೊಡಲಿದೆ.
ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಎಳೆಯನ್ನು ಮೂಲವಾಗಿಟ್ಟುಕೊಂಡು ಅದರ ಸುತ್ತ ಹೆಣೆಯಲಾದ ಕಥಾಹಂದರವೇ 'ಹೊಂದಿಸಿ ಬರೆಯಿರಿ' ಸಿನಿಮಾ. ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಕಥೆಯಿದೆ. ಭಾವನಾತ್ಮಕ ಜರ್ನಿಯೂ ಇದೆ. ಈಗಾಗಲೇ ಚಿತ್ರ ಸ್ಯಾಂಪಲ್ ವಿಡಿಯೋಗಳ ಮೂಲಕ ಗಮನ ಸೆಳೆದಿದೆ. ಪ್ರಚಾರ ಕಾರ್ಯ ನಡೆಯುತ್ತಿದ್ದು, ನವೆಂಬರ್ 18ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀ ಮಹದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ಅಲ್ಲದೇ ಸುನೀಲ್ ಪುರಾಣಿಕ್, ಪ್ರವೀಣ್ ಡಿ. ರಾವ್ , ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಅವರನ್ನೊಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.