ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ಗೆ ರಿಲೀಫ್ ಸಿಕ್ಕಿದೆ. ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಆಭರಣ ಸಮೂಹವೊಂದರ ವಿರುದ್ಧ 100 ಕೋಟಿ ರೂಪಾಯಿ ಪೋಂಜಿ ಮತ್ತು ವಂಚನೆ ಪ್ರಕರಣದಲ್ಲಿ ಪ್ರಕಾಶ್ ರಾಜ್ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿ ನಟನ ವಿಚಾರಣೆ ಕೂಡ ನಡೆಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರಿಂದ ಕ್ಲೀನ್ ಚಿಟ್ ಸಿಕ್ಕಿದೆ.
ವರದಿಗಳ ಪ್ರಕಾರ, ಪ್ರಕಾಶ್ ರಾಜ್ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸುಳ್ಳು ಎಂದು ತಿಳಿದುಬಂದಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್, "ತಮಿಳು ಅರ್ಥವಾಗದವರಿಗೆ. ನಟ ಪ್ರಕಾಶ್ ರಾಜ್ರವರಿಗೂ ತಮಿಳುನಾಡಿನ ಪ್ರಣವ್ ಜ್ಯುವೆಲ್ಲರ್ಸ್ನ ಮೋಸಕ್ಕೂ ಯಾವ ಸಂಬಂಧವೂ ಇಲ್ಲ ಎಂದು ವಿಶೇಷ ತನಿಖಾಧಿಕಾರಿಗಳಿಂದ ಅಧಿಕೃತ ಪ್ರಕಟಣೆ. ನನ್ನನ್ನು ನಂಬಿ, ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ಸತ್ಯಮೇವ ಜಯತೇ" ಎಂದು ಬರೆದಿದ್ದಾರೆ.
ತಿರುಚಿರಾಪಳ್ಳಿ ಮೂಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್ ಜ್ಯುವೆಲ್ಲರ್ಸ್ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ನವೆಂಬರ್ 20ರಂದು ಇಡಿ ಅಧಿಕಾರಿಗಳು ದಾಳಿ ನಡೆಸಿ 23.70 ಲಕ್ಷ ರೂಪಾಯಿಗಳ ನಗದು ಮತ್ತು ಕೆಲವು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಪ್ರಕಾಶ್ ರಾಜ್ ಈ ಜ್ಯುವೆಲ್ಲರ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಹೀಗಾಗಿ, ಇಡಿಯು ಪ್ರಕಾಶ್ ರಾಜ್ ಅವರ ಹೇಳಿಕೆಯನ್ನು ದಾಖಲಿಸಲು ಬಯಸಿ, ಕೆಲವು ಉದ್ದೇಶಿತ ಪಾವತಿಗಳು ಮತ್ತು ಇತರ ಹಣಕಾಸಿನ ವಹಿವಾಟುಗಳ ಬಗ್ಗೆ ತಿಳಿದುಕೊಳ್ಳಲು ವಿಚಾರಣೆಗೆ ಒಳಗಾಗುವಂತೆ ಕಳೆದ ತಿಂಗಳು ನಟನಿಗೆ ಸಮನ್ಸ್ ಜಾರಿ ಮಾಡಿದ್ದರು.