ಬಹುಭಾಷಾ ನಟ ಪ್ರಕಾಶ್ ರೈ ಗೆ (ಪ್ರಕಾಶ್ ರಾಜ್) ಇಂದು ಹುಟ್ಟುಹಬ್ಬದ ಸಂಭ್ರಮ. 1965 ರ ಮಾರ್ಚ್ 26ರಂದು ಜನಿಸಿದ ಇವರು 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತನ್ನದೇ ಆದ ವಿಭಿನ್ನ ನಟನೆಯ ಮೂಲಕ ಸ್ಯಾಂಡಲ್ವುಡ್ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, ಸಮಾಜ ಕಾರ್ಯದಲ್ಲೂ ಸದಾ ಮುಂದಿದ್ದಾರೆ.
ಪ್ರಕಾಶ್ ರಾಜ್ ಮೊದಲಿಗೆ ಕನ್ನಡದ 'ಬಿಸಿಲು ಕುದುರೆ' ಎಂಬ ಧಾರವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರದಲ್ಲಿ ಕನ್ನಡದ ಜೊತೆಗೆ ಗುಡ್ಡದ ಭೂತ ಎಂಬ ತುಳು ಸೀರಿಯಲ್ನಲ್ಲೂ ಅಭಿನಯಿಸಿದ್ದಾರೆ. ಇವರ ಅದ್ಭುತ ನಟನೆಯನ್ನು ಕಂಡ ಕಾಲಿವುಡ್ ನಿರ್ದೇಶಕ ಕೆ.ಬಾಲಚಂದ್ರ ಇವರನ್ನು ಚಿತ್ರರಂಗಕ್ಕೆ ಕರೆತಂದರು. ಇಲ್ಲಿಂದ ಸಿನಿ ವೃತ್ತಿ ಜೀವನ ಪ್ರಾರಂಭಿಸಿದ ಪ್ರಕಾಶ್, ನಾಯಕ ನಟನಾಗಿ ಮಾತ್ರವಲ್ಲದೇ ಪೋಷಕ ಪಾತ್ರ ಸೇರಿದಂತೆ ಹೆಚ್ಚಾಗಿ ಖಳನಾಯಕನಾಗಿಯೇ ನಟಿಸಿದ್ದಾರೆ. ಅವರ ಕಂಚಿನ ಕಂಠಕ್ಕೆ ಯಾವ ಪಾತ್ರ ಕೊಟ್ಟರೂ ಅದನ್ನು ನಿಭಾಯಿಸಬಲ್ಲ ಶಕ್ತಿಯಿದೆ.
ಕನ್ನಡದ ರಾಮಾಚಾರಿ, ರಣಧೀರ, ಅಜಯ್, ಪುಟ್ಟಕ್ಕನ ಹೈವೇ, ಕೆಜಿಎಫ್ 2, ನಿಷ್ಕರ್ಷ, ಲಾಕಪ್ ಡೆತ್ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅದರಲ್ಲೂ ಅವರು ನಟಿಸಿರುವ 'ನಾಗಮಂಡಲ' ಚಿತ್ರ ಸೂಪರ್ ಹಿಟ್ ಕಂಡಿದೆ. ವಿವಿಧ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಅವರು 'ನಾನು ನನ್ನ ಕನಸು' ಎಂಬ ಚಿತ್ರವನ್ನು ಸ್ವತಃ ನಿರ್ದೇಶಿಸಿ ಉತ್ತಮ ಯಶಸ್ಸು ಕಂಡಿದ್ದಾರೆ. ಅಲ್ಲದೇ ಸದ್ಯ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕವೂ ಸುದ್ದಿಯಲ್ಲಿರುತ್ತಾರೆ. ಮೂಲತಃ ಕನ್ನಡಿಗರಾಗಿದ್ದರೂ, ತೆಲುಗಿನಲ್ಲಿ ಸ್ಟಾರ್ ಎಂಬ ಪಟ್ಟ ಇವರಿಗಿದೆ.
ಇದನ್ನೂ ಓದಿ:'ಹ್ಯಾಪಿ ಬರ್ತ್‌ಡೇ ಅಮ್ಮಲು': ಪತ್ನಿಗೆ ವಿಶೇಷವಾಗಿ ಶುಭ ಕೋರಿದ RRR ಸ್ಟಾರ್ ಜೂ.ಎನ್ಟಿಆರ್