ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕುರಿತ ಸುದ್ದಿಗಳು, ವಿಡಿಯೋ - ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ. ಇದೀಗ ಬಹು ಉತ್ಸಾಹಿ ಮಹಿಳಾ ಫ್ಯಾನ್ ಒಬ್ಬರು ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರಿಗೆ "ಕಪಾಳಮೋಕ್ಷ" ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಾಗಂತ ಇದು ಗಂಭೀರ "ಕಪಾಳಮೋಕ್ಷ" ಅಲ್ಲ. ಬದಲಾಗಿ ಮೆಚ್ಚನ ನಟನಿಗೆ ಕಟ್ಟಾ ಅಭಿಮಾನಿಯೊಬ್ಬರು ಕೊಟ್ಟ ಪ್ರೀತಿಯ, ಮುದ್ದಿನ ಪೆಟ್ಟು ಎಂದರೆ ತಪ್ಪಾಗಲ್ಲ ನೋಡಿ.
2019ರಲ್ಲಿ ಮೊದಲ ಬಾರಿ ಪೋಸ್ಟ್ ಮಾಡಲಾಗಿರುವ ವಿಡಿಯೋ ಇದು. ಪ್ರಸ್ತುತ ಸೋಷಿಯಲ್ ಮೀಡಿಯಾ ಸುತ್ತುವರಿಯುತ್ತಿದೆ. ವೈರಲ್ ವಿಡಿಯೋದಲ್ಲಿ, ಅತ್ಯಂತ ಉತ್ಸಾಹಿ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ನಟ ಪ್ರಭಾಸ್ ಅವರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ತಮ್ಮ ಮೆಚ್ಚಿನ ನಟನನ್ನು ಭೇಟಿಯಾದ ಖುಷಿಯಲ್ಲಿದ್ದ ಹುಡುಗಿ, ಪ್ರಭಾಸ್ ಅವರ ಸುತ್ತ ಕುಣಿದು ಕುಪ್ಪಳಿಸುವುದನ್ನು ಕಾಣಬಹುದು.
ಇಬ್ಬರು ಅಭಮಾನಿಗಳು ನಟನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಪ್ರಭಾಸ್ ಕೂಡ ನಗುಮೊಗದಿಂದ ಕ್ಯಾಮರಾಗೆ ಪೋಸ್ ಕೊಟ್ಟರು. ಫೋಟೋ ಸೆಷನ್ ಮುಗಿದ ಬಳಿಕ ಭಾವಪರವಶರಾದ ಮಹಿಳಾ ಅಭಿಮಾನಿ ಪ್ರಭಾಸ್ ಅವರಿಗೆ ಸ್ನೇಹಪೂರ್ವಕವಾಗಿ, ಮುದ್ದಿನ ಪೆಟ್ಟು ಕೊಟ್ಟರು. ಅಭಿಮಾನಿಯ ನಡೆಗೆ ಅಲ್ಲಿದವರು ಕೊಂಚ ಗಾಬರಿಗೊಂಡರು. ವಿಶೇಷವಾಗಿ ನಟ ಪ್ರಭಾಸ್ ಕೂಡ ಕಸಿವಿಸಿಗೊಳಗಾದರು. ವಿಡಿಯೋದಲ್ಲಿ, ಪ್ರಭಾಸ್ ಗೊಂದಲಕ್ಕೊಳಗಾಗಿ ಹಾವ ಭಾವ ಬದಲಾಗಿದ್ದನ್ನು ಕಾಣಬಹುದು. ಹಳೇ ವಿಡಿಯೋ ಸಮಾಜಿಕ ಜಾಲತಾಣದಲ್ಲೀಗ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಯ ವರ್ತನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.