ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶಿಸಿದ 'ಸಲಾರ್' ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಧೂಳೆಬ್ಬಿಸುತ್ತಿದೆ. ಡಿಸೆಂಬರ್ 22ರಂದು ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. 'ಬಾಹುಬಲಿ 2' ನಂತರ ಪ್ರಭಾಸ್ ವೃತ್ತಿಜೀವನದ ಅತಿದೊಡ್ಡ ಹಿಟ್ ಸಿನಿಮಾ ಲಿಸ್ಟ್ಗೆ 'ಸಲಾರ್' ಸೇರಿಕೊಂಡಿದೆ. ಇತ್ತೀಚೆಗೆ ಹಾಲಿವುಡ್ ಮಾಧ್ಯಮದೊಂದಿಗೆ ಮಾತನಾಡಿರುವ ಡಾರ್ಲಿಂಗ್ ಸಿನಿಮಾ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
"ನನಗೆ 'ಸಲಾರ್' ಕಥೆ ತುಂಬಾ ಇಷ್ಟವಾಯಿತು. ಅದನ್ನು ಕೇಳಿದ ತಕ್ಷಣ ಒಪ್ಪಿಕೊಂಡೆ. ನನ್ನ ವೃತ್ತಿಜೀವನದಲ್ಲಿ ನಾನು ಮಾಡಿದ ವಿಭಿನ್ನ ಪಾತ್ರಗಳಲ್ಲಿ ಇದೂ ಒಂದು. ಈ ಪಾತ್ರ ತುಂಬಾ ಚಾಲೆಂಜಿಂಗ್ ಆಗಿತ್ತು. 'ಬಾಹುಬಲಿ' ನನ್ನ ವೃತ್ತಿಜೀವನದ ಆಯಾಮವನ್ನೇ ಬದಲಾಯಿಸಿತು. ಆ ನಂತರ ಆಯ್ಕೆಯಾದ ಸಿನಿಮಾಗಳೆಲ್ಲ ಹೊಸಬರೇ ಇರುವಂತೆ ನೋಡಿಕೊಂಡೆ. ಅದರ ಭಾಗವಾಗಿ ನಾನು 'ಸಲಾರ್'ಗೆ ಓಕೆ ಹೇಳಿದೆ. ಅಲ್ಲದೇ, ಪ್ರೇಕ್ಷಕರು ಕೂಡ ವೈವಿಧ್ಯಮಯ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಸದ್ಯ ಇಡೀ ವಿಶ್ವವೇ ಭಾರತೀಯ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದೆ. ಅವರು ನಮ್ಮ ಸಿನಿಮಾಗಳನ್ನು ಗುರುತಿಸುತ್ತಿದ್ದಾರೆ. ರಾಜಮೌಳಿ, ಪ್ರಶಾಂತ್ ನೀಲ್ರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ಸಲಾರ್ ಪಾರ್ಟ್ ಕೊನೆಯಲ್ಲಿ ನಾವು ಮುಂದುವರೆದ ಭಾಗವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಮೊದಲ ಭಾಗಕ್ಕೆ ಹೋಲಿಸಿದರೆ ಪಾರ್ಟ್ 2 ಇನ್ನಷ್ಟು ಅದ್ಭುತವಾಗಿರಲಿದೆ" ಎಂದು ಪ್ರಭಾಸ್ ತಿಳಿಸಿದ್ದಾರೆ.