ಚೆನ್ನೈ (ತಮಿಳುನಾಡು):ಲೋಕಸಭೆ ಚುನಾವಣೆಯ ತಯಾರಿಯಲ್ಲಿರುವಬಿಜೆಪಿಗೆ ತಮಿಳುನಾಡಿನಲ್ಲಿ ಭಾರಿ ಹಿನ್ನಡೆಯಾಗಿದೆ. ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ಗೌತಮಿ ತಡಿಮಲ್ಲ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. 'ತಮಗೆ ವಂಚಿಸಿದ ವ್ಯಕ್ತಿಯ ಪರವಾಗಿ ಪಕ್ಷವು ನಿಂತಿದೆ' ಎಂದು ಆರೋಪಿಸಿ, ಕೇಸರಿ ಜೊತೆಗಿನ ತಮ್ಮ 25 ವರ್ಷಗಳ ಒಡನಾಟವನ್ನು ಕೊನೆಗೊಳಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಅತ್ಯಂತ ಭಾರವಾದ ಮನಸ್ಸು ಮತ್ತು ಭ್ರಮನಿರಸನದಿಂದ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಾನು 25 ವರ್ಷಗಳ ಹಿಂದೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನಿರ್ಧರಿಸಿ ಪಕ್ಷಕ್ಕೆ ಸೇರಿದ್ದೆ. ನನ್ನ ಜೀವನದಲ್ಲಿ ನಾನು ಎದುರಿಸಿದ ಎಲ್ಲಾ ಸವಾಲುಗಳ ಹೊರತಾಗಿಯೂ ನಾನು ಆ ಬದ್ಧತೆಯನ್ನು ಗೌರವಿಸಿದ್ದೇನೆ. ಆದರೆ ಇಂದು ನಾನು ಜೀವನದಲ್ಲಿ ಊಹಿಸಲಾಗದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತಿದ್ದೇನೆ. ಪಕ್ಷ ಮತ್ತು ಮುಖಂಡರಿಂದ ಯಾವುದೇ ರೀತಿಯ ಬೆಂಬಲ ಪಡೆಯಲು ಸಾಧ್ಯವಾಗಿಲ್ಲ" ಎಂದು ಹೇಳಿದ್ದಾರೆ.
"ನಾನು 17ನೇ ವಯಸ್ಸಿನಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿಜೀವನವು 37 ವರ್ಷಗಳ ಕಾಲ ಸಿನಿಮಾ, ದೂರದರ್ಶನ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ವ್ಯಾಪಿಸಿದೆ. ಈ ವಯಸ್ಸಿನಲ್ಲಿ ಆರ್ಥಿಕವಾಗಿ ಸುಭದ್ರವಾಗಿರಲು ಮತ್ತು ನನ್ನ ಮಗಳ ಭವಿಷ್ಯಕ್ಕಾಗಿ ನಾನು ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ನಾನು ಮತ್ತು ನನ್ನ ಮಗಳು ಸ್ಥಿರವಾಗಿ ಮತ್ತು ಸುರಕ್ಷಿತವಾಗಿರಬೇಕಾದ ಸ್ಥಳದಲ್ಲಿ ನಾನು ಈಗ ನಿಂತಿದ್ದೇನೆ" ಎಂದಿದ್ದಾರೆ.