ಕನ್ನಡ ಚಿತ್ರರಂಗದಲ್ಲಿ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿರುವ ಚಿತ್ರಗಳದ್ದೇ ಸುದ್ದಿ. ಈ ಪೈಕಿ ಉಪೇಂದ್ರ ಮತ್ತು ಸುದೀಪ್ ನಟನೆಯ ಬಹುನಿರೀಕ್ಷಿತ ಕಬ್ಜ ಕೂಡ ಒಂದು. ಟ್ರೇಲರ್ ಮತ್ತು ಅದ್ಧೂರಿ ಮೇಕಿಂಗ್ನಿಂದ ಸುದ್ದು ಮಾಡುತ್ತಿರುವ ಈ ಚಿತ್ರ ಇದೀಗ ತೆಲುಗು ನಾಡಿನಲ್ಲಿಯೂ ಗಮನ ಸೆಳೆಯುತ್ತಿದೆ. ಫೆ.4 ರಂದು ಹೈದರಾಬಾದ್ನಲ್ಲಿ ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದ್ದು ಭರ್ಜರಿ ತಯಾರಿ ನಡೆಯುತ್ತಿದೆ.
ಆಂಧ್ರ ಮತ್ತು ತೆಲಂಗಾಣದ ವಿತರಣಾ ಹಕ್ಕು ಕೂಡ ಮಾರಾಟವಾಗಿದ್ದು ಹಾಡಿನ ಬಿಡುಗಡೆಯ ಜೊತೆಗೆ ವಿತರಣೆಯಿಂದಲೂ ಸಿನಿಮಾ ಸೌಂಡ್ ಮಾಡುತ್ತಿದೆ. ಟಾಲಿವುಡ್‌ನ ಖ್ಯಾತ ನಟ ನಿತಿನ್ ಈ ಸಿನಿಮಾವನ್ನು ಎರಡೂ ರಾಜ್ಯಗಳಿಗೆ ವಿತರಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ನೀಡಿದ್ದಾರೆ. ಉಪೇಂದ್ರ ಮತ್ತು ಸುದೀಪ್ ಅವರನ್ನು ನಿಮ್ಮ ಮುಂದೆ ತರಲು ಖುಷಿ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
"ಬಹುನಿರೀಕ್ಷಿತ ಕಬ್ಜ ಚಿತ್ರದ ಮೂಲಕ ಸೂಪರ್ ಸ್ಟಾರ್ಗಳಾದ ನಿಮ್ಮ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರನ್ನು ತೆಲುಗು ಭಾಷೆಯಲ್ಲಿ ತೆರೆಗೆ ತರಲು ನನಗೆ ಸಂತೋಷವಾಗುತ್ತಿದೆ. ಮಾರ್ಚ್ 17ರಂದು ದೊಡ್ಡ ಪರದೆಯಲ್ಲಿ ಪ್ರಜ್ವಲಿಸಲಿದೆ" ಎಂದು ನಟ ನಿತಿನ್ ಶೀರ್ಷಿಕೆ ತಿಳಿಸಿದ್ದಾರೆ.
ಕಬ್ಜದ ಹಿಂದಿ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ. ಬಾಲಿವುಡ್ನ ಪ್ರತಿಷ್ಠಿತ ಸಂಸ್ಥೆಯೇ ಹಿಂದಿಯಲ್ಲಿ ರಿಲೀಸ್ ಮಾಡುತ್ತಿದೆ. ಅಲ್ಲದೇ, ಚಿತ್ರದ ಟ್ರೇಲರ್ ಬಿಡುಗಡೆಯನ್ನು ಮುಂಬೈನಲ್ಲಿ ಮಾಡಲು ಸಿದ್ಧತೆಯಾಗುತ್ತಿದೆ. ಈ ಹೊತ್ತಿನಲ್ಲಿ ನಿತಿನ್ ಕೂಡ ತೆಲುಗಿನ ಹಕ್ಕು ಖರೀದಿಸಿದ್ದಾರೆ. ಹಾಗಾಗಿ ಚಿತ್ರತಂಡದ ಖುಷಿ ಇಮ್ಮಡಿಯಾಗಿದೆ. ಇದಕ್ಕೆ ಪ್ರತಿಯಾಗಿ ನಿರ್ದೇಶಕ ಆರ್.ಚಂದ್ರು ಅವರು ನಟ ನಿತಿನ್ ಅವರಿಗೆ ಚಂದ್ರು ಧನ್ಯವಾದ ತಿಳಿಸಿದ್ದಾರೆ.