'ಹಲೋ ಡ್ಯಾಡಿ' ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟ ನಿತಿನ್ ಗೋಪಿ ಇಂದು ನಿಧನರಾಗಿದ್ದಾರೆ. ಡಾ. ವಿಷ್ಣುವರ್ಧನ್ ಅಭಿನಯದ ಹಲೋ ಡ್ಯಾಡಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಿತಿನ್ ಬಾಲನಟರಾಗಿ ಕನ್ನಡಿಗರ ಮನಗೆದ್ದಿದ್ದರು. ಅದರಲ್ಲೂ 'ಶಾಲೆಗೆ ಈ ದಿನ ರಜಾ' ಹಾಡಿನ ಮೂಲಕ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದರು.
ಸಿನಿಮಾ ಹಾಗೂ ಕಿರುತೆರೆಯಲ್ಲಿ ಬೇಡಿಕೆ ಹೊಂದಿದ್ದ ನಿತಿನ್ ಗೋಪಿ ಅವರಿಗೆ ಇಂದು ಮುಂಜಾನೆ 5 ಗಂಟೆಗೆ ಸುಮಾರಿಗೆ ತ್ರೀವ ಹೃದಯಾಘಾತ ಆಗಿದೆ. ಕೂಡಲೇ ನಟನ ಅಪ್ಪ ಅಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ದಾರಿ ಮಧ್ಯೆಯೇ ನಿತಿನ್ ಇಹಲೋಕ ತ್ಯಜಿಸಿದ್ದಾರೆ ಎಂದು ಕಿರುತೆರೆ ಸಂಘದ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ನಲ್ಲಿ ನಿತಿನ್ ಅಪ್ಪ ಅಮ್ಮನ ಜೊತೆ ವಾಸವಿದ್ದರು. ಚಿರಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್ ಬಾಲ ಕಲಾವಿದರಾಗಿ ನಟಿಸಿದ್ದರು. ಶ್ರುತಿ ನಾಯ್ಡು ಪ್ರೊಡಕ್ಷನ್ನಲ್ಲಿ ಹಾಗೂ ಬಾಲಾಜಿ ಟೆಲಿಫಿಲಮ್ಸ್ ಅಡಿಯಲ್ಲಿ ಮೂಡಿ ಬಂದ ಧಾರಾವಾಹಿಗಳಿಗೆ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದ್ದರು.
ಕನ್ನಡದಲ್ಲಿ ಮಾತ್ರವಲ್ಲ ತಮಿಳು ಧಾರಾವಾಹಿಯನ್ನೂ ಅವರು ನಿರ್ದೇಶನ ಮಾಡಿದ್ದಾರೆ. ಕೇವಲ 39ರ ವಯಸ್ಸಿನ ನಿತಿನ್, ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಅಂದ ಹಾಗೆ ಇವರು ಖ್ಯಾತ ಕೊಳಲು ವಾದಕ ಗೋಪಿ ಅವರ ಪುತ್ರ. ನಿತಿನ್ ಅಗಲಿಕೆಗೆ ಕಿರುತೆರೆ ಹಾಗು ಸಿನಿಮಾರಂಗದವರು ಕಂಬನಿ ಮಿಡಿದಿದ್ದಾರೆ.