ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ 'ವಿಜಯಾನಂದ' ಸಿನಿಮಾದ ನಾಯಕ ನಟ ಮತ್ತು ನಿರ್ದೇಶಕಿ ಮದುವೆಯಾಗಲಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾರಾ ಜೋಡಿಯ ಮದುವೆ ವಿಚಾರ ಹೊರಬರುತ್ತಿದ್ದಂತೆ, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ನಿಹಾಲ್- ರಿಷಿಕಾ ಶರ್ಮಾ ಮದುವೆ:ಫೇಸ್ಬುಕ್ನಲ್ಲಿ ತಮ್ಮ ಫೋಟೋ ಹಂಚಿಕೊಂಡಿರುವ ನಿರ್ದೇಶಕಿ ರಿಷಿಕಾ ಶರ್ಮಾ, ''ಒಂದು ಶುಭ ಮತ್ತು ಖುಷಿ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ. ನಿಹಾಲ್ ಜೊತೆ ಶೀಘ್ರದಲ್ಲೇ (ಫೆಬ್ರವರಿಯಲ್ಲಿ) ದಾಂಪತ್ಯ ಜೀವನ ಆರಂಭಿಸಲಿದ್ದೇನೆ. ಲಕ್ಷಾಂತರ ಸಣ್ಣಸಣ್ಣ ಕ್ಷಣಗಳಿಂದ ನಮ್ಮ ಪ್ರೇಮಕಥೆ ಸೃಷ್ಟಿಯಾಗಿದೆ. ನಮ್ಮ 9 ವರ್ಷಗಳ ಸ್ನೇಹ ಮತ್ತು ಪ್ರೀತಿ ಸುಗಮ ದಾರಿಯಲ್ಲಿ ಸಾಗುತ್ತಿದೆ, ಹರಸಿ ಹಾರೈಸಿ. ನಿಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ಸದಾ ಮುನ್ನೋಡುವ - ರಿಷಿಕಾ ಮತ್ತು ನಿಹಾಲ್'' ಎಂದು ಬರೆದುಕೊಂಡಿದ್ದಾರೆ.
2018ರಲ್ಲಿ ಟ್ರಂಕ್ ಸಿನಿಮಾ ಬಿಡುಗಡೆ ಆಗಿತ್ತು. ನಿಹಾಲ್ ಈ ಚಿತ್ರದ ನಟ ಮತ್ತು ರಿಷಿಕಾ ಶರ್ಮಾ ಈ ಚಿತ್ರದ ನಿರ್ದೇಶಕಿ. 'ಟ್ರಂಕ್' ರಿಷಿಕಾ ಶರ್ಮಾ ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಸಿನಿಮಾ. ಬಳಿಕ ಸೈಕೋ ಶಂಕರ, ಕೆಂಪೇಗೌಡ 2, ವಿಜಯಾನಂದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದು ನಿಹಾಲ್ ಅವರಿಗೆ ಹೀರೋ ಆಗಿ ಮೊದಲ ಸಿನಿಮಾ.
ವಿಜಯಾನಂದ ಸಿನಿಮಾ:ಪದ್ಮಶ್ರೀ ಪುರಸ್ಕೃತ, ಯಶಸ್ವಿ ಉದ್ಯಮಿ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ 'ವಿಜಯಾನಂದ' ಕಳೆದ ಡಿಸೆಂಬರ್ನಲ್ಲಿ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಕಂಡು ಯಶಸ್ವಿ ಆಗಿತ್ತು. ಡಿಸೆಂಬರ್ 9ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಅಂದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ 1,200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮನ ಗೆದ್ದಿತ್ತು.