ನಟ ರಮೇಶ್ ಅರವಿಂದ್ ನಡೆಸಿಕೊಡುವ ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಶೋ ಅಪಾರ ವೀಕ್ಷಕರನ್ನು ಸಂಪಾದಿಸಿದೆ. ಈಗಾಗಲೇ ಸೀಸನ್ 5 ರಲ್ಲಿ 9 ಸಾಧಕರು ಬಂದಿದ್ದು, 10ನೆಯ ಅತಿಥಿಯಾಗಿ ಸ್ಯಾಂಡಲ್ವುಡ್ ಲವ್ಲೀ ಸ್ಟಾರ್ ಎಂದೇ ಖ್ಯಾತರಾದ ನಟ ನೆನಪಿರಲಿ ಪ್ರೇಮ್ ಆಗಮಿಸಿದ್ದಾರೆ. ಸಾಧಕರ ಸೀಟ್ನಲ್ಲಿ ಕುಳಿತು ಬಾಲ್ಯ, ಶಿಕ್ಷಣ, ಉದ್ಯೋಗ, ಸಿನಿಮಾ, ಕುಟುಂಬ, ಸ್ನೇಹಿತರು ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಿರಿತೆರೆಯಲ್ಲಿ ವಿಶೇಷ ಸಾಧನೆಗೈದ ಪ್ರೇಮ್ ತಮ್ಮ ಜೀವನದ ಕಥೆಯನ್ನು ತೆರೆದಿಟ್ಟರು.
ಲವ್ಲೀ ಪ್ರೇಮ್ ಲವ್ ಸ್ಟೋರಿ:ನಟ ಪ್ರೇಮ್ ಅವರದ್ದು ತುಂಬಾ ಬಡತನ ಕುಟುಂಬ. ಹೀಗಾಗಿ ಅವರು ತಂಗಿಯರ ಓದು, ಅವರ ಮದುವೆಗಾಗಿ ಹತ್ತನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ತಮ್ಮ ಕುಲ ಕಸುಬಾದ ನೇಕಾರಿಕೆ ಮಾಡಲು ತೊಡಗಿದ್ದರು. ಹೀಗೆ ಒಂದು ದಿನ ಅಕಸ್ಮಾತ್ ಆಗಿ ಜ್ಯೋತಿ ಅವರನ್ನು ಭೇಟಿಯಾದರು. ಅವರನ್ನೇ ಮದುವೆಯಾಗಲು ನಿರ್ಧರಿಸಿದರು. ಅದಕ್ಕೂ ಮೊದಲು ಮದುವೆ ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಅವರನ್ನು ಜ್ಯೋತಿ ನೋಡಿದ್ದರು. ಹೀಗೆ ಅವರಿಬ್ಬರ ಪರಿಚಯ ಸ್ನೇಹದಿಂದ ಶುರುವಾಗಿ ಪ್ರೇಮಕ್ಕೆ ಚಿಗುರೊಡೆಯಿತು.
ಒಂದು ದಿನ ಪ್ರೇಮ್ ಅವರು ಜ್ಯೋತಿಗೆ ಪತ್ರವೊಂದನ್ನು ಬರೆದು, ನನಗೆ ಜೀವನದಲ್ಲಿ ಬಹಳಷ್ಟು ಜವಾಬ್ದಾರಿಗಳಿವೆ. ನಾನು ತಂಗಿಯರ ಮದುವೆ ಮಾಡಬೇಕು. ಈಗಲೇ ಪ್ರೀತಿ- ಗೀತಿ ಅಂತೆಲ್ಲಾ ಬೇಡ. ಇನ್ನೆರಡು ವರ್ಷ ಹೀಗೆ ಸ್ನೇಹಿತರಾಗಿಯೇ ಇರೋಣ. ಆಮೇಲೆ ಪ್ರೀತಿ ಉಳಿದಿದ್ದರೆ ಮದುವೆಯಾಗೋಣ ಎಂದು ನಿರ್ಧಾರ ಮಾಡಿದ್ದರಂತೆ. ಆದರೆ ಪ್ರೇಮ್ ಮತ್ತು ಜ್ಯೋತಿ ಪ್ರೀತಿ ವಿಷಯ ಮನೆಯವರಿಗೆ ಗೊತ್ತಾಗಿ ಜ್ಯೋತಿ ಅವ್ರಿಗೆ ಗಂಡು ಹುಡುಕಲು ಆರಂಭಿಸಿದ್ದರಂತೆ. ಇದರಿಂದ ಆತಂಕಗೊಂಡ ಅವರಿಬ್ಬರು ಮನೆಯವರ ವಿರೋಧದ ನಡುವೆಯೂ ಮದುವೆಯಾಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:'ಅಹಂ, ಭಯ ನಮ್ಮನ್ನು ಬೇರ್ಪಡಿಸುತ್ತವೆ': ಮಾಜಿ ಪತಿಯ ಮೆಚ್ಚುಗೆಗೆ ಸಮಂತಾ ಪರೋಕ್ಷ ಪ್ರತಿಕ್ರಿಯೆ
ಜ್ಯೋತಿ ತಮ್ಮ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಬಂದಿದ್ದರಂತೆ. ಪ್ರೇಮ್ ಸಹ ಗೆಳೆಯರ ಸಹಾಯದಿಂದ ಜ್ಯೋತಿಯವರನ್ನೂ ಮದುವೆಯೂ ಆಗಿಬಿಟ್ಟರಂತೆ. ಅದಾಗಿ ಎರಡು ಕುಟುಂಬದವರ ಜೊತೆ ಮಾತನಾಡಿ ರಾಜಿ ಮಾಡಿಸಿದ್ದಾರೆ. ಜ್ಯೋತಿಯನ್ನು ಮದುವೆಯಾದ ಪ್ರೇಮ್ಗೆ ಸರಿಯಾದ ಮನೆ ಇಲ್ಲದ ಕಾರಣ ಅವರ ಗೆಳೆಯ ತಮ್ಮ ಮನೆಯನ್ನು ಬಿಟ್ಟು ಕೊಟ್ಟಿದ್ದರಂತೆ. ಅದಾಗಿ ಅಳಿಯನ ಕಷ್ಟ ನೋಡಿದ ಜ್ಯೋತಿ ತಾಯಿ ಅವರ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ವರ್ಷ ಅತ್ತೆ ಮನೆಯಲ್ಲೇ ವಾಸವಿದ್ರಂತೆ ಪ್ರೇಮ್.
ಆದರೆ ಅವರು ಉದ್ದಿಮೆಯಲ್ಲಿ ಬಹಳಷ್ಟು ನಷ್ಟ ಅನುಭವಿಸಿ ಸಾಲ ಮಾಡಿದ್ದರಂತೆ. ಅದನ್ನು ತೀರಿಸಲು ಬಹಳಷ್ಟು ಕಷ್ಟ ಪಟ್ಟಿದ್ರಂತೆ. ಸಾಲ ಕೊಟ್ಟವರ ಕಿರಿ ಕಿರಿ ಹೆಚ್ಚಾದಂತೆ ಪ್ರೇಮ್ ಅವರಿಗೆ ಮಾನಸಿಕವಾಗಿ ಒತ್ತಡ ಬೀರಿದೆ. ಆಗ ಜ್ಯೋತಿ ಅವರು ತಮ್ಮ ಚಿನ್ನದ ತಾಳಿಯನ್ನು ಬಿಚ್ಚಿಕೊಟ್ಟಿದ್ದರಂತೆ. ಅವಳು ನನಗೆ ಎರಡನೇ ತಾಯಿಯಂತೆ, ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ಪ್ರೇಮ್ ಕಣ್ಣೀರು ಹಾಕಿದ್ದಾರೆ. ಅದರ ನಂತರ ಪ್ರೇಮ್ ಅವರಿಗೆ ಅಂತಹ ಕಷ್ಟ ಬಂದಿಲ್ಲವಂತೆ. ನಟನೆ ಕೈ ಹಿಡಿದ ಮೇಲೆ ಪರಿಸ್ಥಿತಿ ಸುಧಾರಿಸಿತು ಎಂದಿದ್ದಾರೆ ಪ್ರೇಮ್.
ಜ್ಯೋತಿ ಅವರಿಗೆ ಪ್ರೇಮ್ ಯಾವಾಗಲೂ ನೂರು ಜನ್ಮಕ್ಕೂ ಹಾಡನ್ನು ಹೇಳುತ್ತಲೇ ಇರುತ್ತಾರಂತೆ. ಇದನ್ನು ಕೇಳಿದ ರಮೇಶ್ ಅವರಿಬ್ಬರನ್ನು ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದಾರೆ. ಅದೇ ಹಾಡಿಗೆ ಅವರಿಬ್ಬರು ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ಪ್ರೇಮ್ ಗೆಳೆಯರು ಆಗಮಿಸಿ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಬಾಲ್ಯದ ದಿನಗಳು, ಪ್ರೇಮ್ ತರ್ಲೆ ತುಂಟಾಟಗಳನ್ನು ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಪ್ರೇಮ್ ಅವರೊಳಗಿದ್ದ ಮುಗ್ಧ ಮನಸ್ಸಿನ ಪರಿಚಯ ಕನ್ನಡದ ಜನತೆಗಾಗಿದೆ.
ಇದನ್ನೂ ಓದಿ:ವೀಕೆಂಡ್ ವಿತ್ ರಮೇಶ್: ಸಾಧಕರ ಸೀಟ್ನಲ್ಲಿ ಸಿಹಿಕಹಿ ಚಂದ್ರು, ಶಿಕ್ಷಣ ತಜ್ಞ ಗುರುರಾಜ ಕರಜಗಿ