ಚೆನ್ನೈ (ತಮಿಳುನಾಡು):ಸಂಗೀತ ಸಂಯೋಜಕ ಮತ್ತು ನಟ ವಿಜಯ್ ಆ್ಯಂಟನಿ ಅವರ ಪುತ್ರಿ ಇಂದು ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ. ವಿಜಯ್ ಆ್ಯಂಟನಿ ತಮ್ಮ ಕುಟುಂಬದೊಂದಿಗೆ ಚೆನ್ನೈನ ಡಿಡಿಕೆ ರಸ್ತೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಮೀರಾ ಮತ್ತು ಲಾರಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿ ಮಗಳು ಮೀರಾ ಚೆನ್ನೈನ ಖಾಸಗಿ ಕಾಲೇಜಿನಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.
ಸೆಪ್ಟೆಂಬರ್ 18ರ ರಾತ್ರಿ ಕೊಂಚ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ನಂತರ, ನಿದ್ರಿಸುವುದಾಗಿ ತಂದೆಗೆ ಹೇಳಿ ಕೊಠಡಿಗೆ ಹೋಗಿದ್ದಾರೆ. ಇಂದು ಬೆಳಗ್ಗೆ ಮಗಳನ್ನು ಕರೆಯಲು ತಂದೆ ಕೋಣೆಗೆ ತೆರಳಿದ್ದಾರೆ. ಆಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಮನೆ ಸಿಬ್ಬಂದಿಯ ನೆರವಿನಿಂದ ಕಾವೇರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಆಳ್ವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಮಾನಸಿಕ ಖಿನ್ನತೆಗೊಳಗಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ನಿಖರ ಕಾರಣ ತಿಳಿಯಲಿದೆ.