ಮಲಯಾಳಂ ಚಿತ್ರ ದೃಶ್ಯಂ 2 ಯಶಸ್ಸಿನ ನಂತರ ನಿರ್ದೇಶಕ ಜೀತು ಜೋಸೆಫ್ ಮೂರನೇ ಭಾಗಕ್ಕಾಗಿ ನಟ ಮೋಹನ್ ಲಾಲ್ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಅವರು ಶನಿವಾರ ನಡೆದ ಮಜವಿಲ್ ಎಂಟರ್‌ಟೈನ್‌ಮೆಂಟ್ ಅವಾರ್ಡ್ಸ್‌ನಲ್ಲಿ ದೃಶ್ಯಂ 3 ಸಿನಿಮಾ ಬಗ್ಗೆ ಅಧಿಕೃತವಾಗಿ ಘೋಷಿಸಿದರು.
ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ 2 ಸಿನಿಮಾ 2021ರ ಫೆಬ್ರವರಿಯಲ್ಲಿ ಅಮೆಜಾನ್ ಪ್ರೈಮ್ನಲ್ಲಿ ನೇರವಾಗಿ ಬಿಡುಗಡೆಯಾಗುವುದರ ಜೊತೆಗೆ ಓಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ಚಿತ್ರ ಈಗಾಗಲೇ ಕನ್ನಡ ಸೇರಿದಂತೆ ಇತರೆ ಭಾಷೆಗಳಿಗೂ ರಿಮೇಕ್ ಆಗಿದೆ. ಇದೀಗ ದೃಶ್ಯಂ 3 ಸಿನಿಮಾ ಬಗ್ಗೆ ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಅಧಿಕೃತ ಘೋಷಣೆ ಮಾಡಿದ್ದು, ನಟ ಮೋಹನ್‌ಲಾಲ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಜೀತು ಜೋಸೆಫ್ ನಿರ್ದೇಶನದ ದೃಶ್ಯಂ 2 ಚಿತ್ರದಲ್ಲಿ ಮೋಹನ್ ಲಾಲ್, ಮೀನಾ, ಎಸ್ತರ್ ಅನಿಲ್, ಅನ್ಸಿಬಾ ಹಾಸನ್, ಆಶಾ ಶರತ್, ಸಿದ್ದಿಕಿ, ಮುರಳಿ ಗೋಪಿ, ಕೃಷ್ಣ, ಸಾಯಿ ಕುಮಾರ್, ಜಿ.ಬಿ. ಗಣೇಶ್ ಕುಮಾರ್ ಅನೀಶ್ ಜಿ ಮೆನನ್ ಹಾಗೂ ಇನ್ನಿತರರು ನಟಿಸಿದ್ದಾರೆ. ಜೀತು ಜೋಸೆಫ್ ಅವರೇ ನಿರ್ದೇಶಿಸಲಿರುವ ದೃಶ್ಯಂ 3ರಲ್ಲಿಯೂ ನಾಯಕ ನಟನಾಗಿ ಮೋಹನ್ ಲಾಲ್ ಮುಂದುವರಿಯಲಿದ್ದಾರೆ. ಚಿತ್ರತಂಡ, ಚಿತ್ರೀಕರಣದ ಬಗ್ಗೆ ಇನ್ನಷ್ಟೇ ಘೋಷಣೆ ಆಗಬೇಕಿದೆ.
ಇದನ್ನೂ ಓದಿ:ಮುದ್ದಾದ ಮಗಳೊಂದಿಗೆ ವೀಕೆಂಡ್ ಎಂಜಾಯ್ ಮಾಡಿದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ
2013 ರಲ್ಲಿ ದೃಶ್ಯಂ ಮೊದಲ ಭಾಗ ಬಿಡುಗಡೆಯಾಗಿತ್ತು. ಈ ಸಿನಿಮಾ ಕೂಡಾ ದೊಡ್ಡ ಮಟ್ಟಿಗೆ ಹಿಟ್ ಆಗಿತ್ತು. ಈ ಸಿನಿಮಾ ಕನ್ನಡಕ್ಕೆ 'ದೃಶ್ಯ' ಹೆಸರಿನಲ್ಲಿ ರಿಮೇಕ್ ಆಗಿತ್ತು. ಈ ಚಿತ್ರದಲ್ಲಿ ರವಿಚಂದ್ರನ್, ನವ್ಯ ನಾಯರ್, ಸ್ವರೂಪಿಣಿ ನಾರಾಯಣ್, ಉನ್ನತಿ, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ನಟಿಸಿದ್ದಾರೆ. ಮಲಯಾಳಂನಲ್ಲಿ 'ದೃಶ್ಯಂ 2' ಯಶಸ್ವಿಯಾಗಿ ದೃಶ್ಯಂ 3 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ.