ರೋಲೆಕ್ಸ್ ಅನ್ನೋ ಹೆಸರು ಕೇಳ್ತಾ ಇದ್ದಂತೆ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ನೆನಪು ಆಗುತ್ತದೆ. ಯಾಕೆಂದರೆ ಈ ಚಿತ್ರದಲ್ಲಿ ನಟ ಸೂರ್ಯ ರೋಲೆಕ್ಸ್ ಎಂಬ ಪವರ್ ಫುಲ್ ಪಾತ್ರ ಮಾಡಿ ಸಿನಿಮಾ ಪ್ರೇಕ್ಷಕರ ಫೇವರೆಟ್ ರೋಲೆಕ್ಸ್ ಆಗಿದ್ದರು. ಇದೀಗ ಸೆನ್ಸೇಶನಲ್ ಸ್ಟಾರ್ ಕೋಮಲ್ ರೋಲೆಕ್ಸ್ ಆಗಲು ಸಜ್ಜಾಗಿದ್ದಾರೆ. ಹೌದು, ಲಾಂಗ್ ಬ್ರೇಕ್ ಬಳಿಕ ಮತ್ತೆ ನಟನೆಗೆ ಮರಳಿರುವ ಕೋಮಲ್ ಕಾಲಾಯ ನಮಃ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮುನ್ನ ನಟ ಕೋಮಲ್ ರೋಲೆಕ್ಸ್ ಆಗಲು ಸಜ್ಜಾಗಿದ್ದಾರೆ.
ನಟ ಕೋಮಲ್ ಫೋಟೋಶೂಟ್: ಹೌದು, ಕಾಲಾಯ ನಮಃ ಚಿತ್ರ ರಿಲೀಸ್ಗೂ ಮುನ್ನ ನಟ ಕೋಮಲ್ ಪವರ್ ಫುಲ್ ಟೈಟಲ್ ಇರುವ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಬಿಲ್ ಗೇಟ್ಸ್ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಈ ರೋಲೆಕ್ಸ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಕಲರ್ ಫುಲ್ ಫೋಟೋಶೂಟ್ ಮಾಡೋದ್ರಲ್ಲಿ ಚಿತ್ರತಂಡ ಬ್ಯುಸಿಯಾಗಿತ್ತು.
ಕೋಮಲ್ ರೆಡ್ ಕಲರ್ ಸೂಟ್ ಧರಿಸಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಕೈಯಲ್ಲಿ ಡ್ರಿಂಕ್ಸ್ ಗ್ಲಾಸ್ ಹಿಡಿದು ಕ್ಯಾಮರಾಗೆ ಪೋಸ್ ಕೊಡ್ತಾ ಇದ್ದರು. ರೋಲೆಕ್ಸ್ ಚಿತ್ರದ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಸೂಟ್ ಕೇಸ್ನಲ್ಲಿ ಭಾರೀ ನಗದು ಇಟ್ಟು, ಐಶಾರಾಮಿ ಮನೆಯಲ್ಲಿ ಕೋಮಲ್ ಫೋಟೋಶೂಟ್ ಮಾಡಿಸುತ್ತಿರೋದನ್ನು ಲಭ್ಯವಿರುವ ವಿಡಿಯೋದಲ್ಲಿ ಗಮನಿಸಬಹುದು. ಕೋಟ್ಯಾಧಿಪತಿ ಅವತಾರದಲ್ಲಿ ಕೋಮಲ್ ಕೂಡ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ವಿಭಿನ್ನ ಶೇಡ್ನಲ್ಲಿ ನಟ ಕೋಮಲ್:ಈ ಚಿತ್ರ ಕಂಟೆಂಟ್ ಬೇಸ್ಡ್ ಸಿನಿಮಾವಾಗಿದ್ದು, ಕೋಮಲ್ ತುಂಬಾ ಇಷ್ಟಪಟ್ಟು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಅವರು ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದು, ನಿರ್ದೇಶಕ ಶ್ರೀನಿವಾಸ್ ಮಂಡ್ಯ ಈ ಚಿತ್ರಕ್ಕೆ ವಿಭಿನ್ನವಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.