ಆ ದಿನಗಳು ಖ್ಯಾತಿಯ ನಟ ಚೇತನ್ ಅವರ ವೀಸಾ ರದ್ದುಗೊಳಿಸಿರುವ ನೋಟಿಸ್ ಅನ್ನು ಕೇಂದ್ರ ಗೃಹ ಇಲಾಖೆ ಕಳುಹಿಸಿದೆ. ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸದ್ದು ಮಾಡುವ ನಟ ಚೇತನ್ ಅವರ ವೀಸಾ ರದ್ದು ವಿಚಾರ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಪರ ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿಯಾಗಿದೆ. ಇದೀಗ ಕಾಂತಾರ ಖ್ಯಾತಿಯ ನಟ ಕಿಶೋರ್ ಸಹ ಪರೋಕ್ಷವಾಗಿ, ಚೇತನ್ ಅವರ ಹೆಸರನ್ನು ಉಲ್ಲೇಖಿಸದೇ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟ ಕಿಶೋರ್ ಪೋಸ್ಟ್: ನಟ ಕಿಶೋರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಧೀರ್ಘ ಬಹರದ ಪೋಸ್ಟ್ ಹಂಚಿಕೊಂಡಿದ್ದಾರೆ. ''ಹಿಂದುತ್ವ ಎನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನಸ್ಥಿತಿ ಇರುವಂತಹದ್ದು. ಆದರೆ 'ಹಿಂದುತ್ವ' ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೇ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೇ ಎನ್ನುವುದು ಎಷ್ಟು ಉಚಿತ?? ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ?. ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ?. ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು?'' ಎಂದು ತಿಳಿಸಿದ್ದಾರೆ.
ನೆಟ್ಟಿಗರು ಹೀಗಂದರು:ಸಾಮಾಜಿಕ ಜಾಲತಾಣದಲ್ಲಿ ನಟ ಕಿಶೋರ್ ಅವರ ಈ ಪೋಸ್ಟ್ಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಧರ್ಮವೇ ಅಧರ್ಮದ ಕಡೆಗೆ ಹೋದಾಗ ಅಧರ್ಮವನ್ನು ಬೆಂಬಲಿಸಿ ಧರ್ಮವನ್ನು ಸರಿಪಡಿಸಬೇಕು' ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. 'ಇಂದು ಜನ ಸಾಮಾನ್ಯರು ಹಿಂದುತ್ವಕ್ಕೆ ಹಿಂದೂ ಧರ್ಮಕ್ಕೂ ಇರುವ ವ್ಯತ್ಯಾಸ ತಿಳಿಯದೇ ಮೋಸ ಹೋಗುತ್ತಿದ್ದಾರೆ. ಈ ಪಕ್ಷ ಜನರ ಮುಗ್ಧತೆಯ ದುರುಪಯೋಗ ಪಡಿಸಿಕೊಳ್ಳುತ್ತಿದೆ' ಎಂದು ಬರೆದಿದ್ದಾರೆ. 'ಹಿಂದೂಗಳು ಅನ್ನೋ ಹೆಸರಲ್ಲಿ ಕನ್ನಡಿಗರಿಗೆ, ಕನ್ನಡಕ್ಕೆ ಅಪಮಾನವಾಗುತ್ತದೆ' ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.