ಕರ್ನಾಟಕ

karnataka

ETV Bharat / entertainment

ನಂಬಿಕೆ ಇರಲಿ ಮೂಢ ನಂಬಿಕೆ ಬೇಡ ಅಂತಾ ನಟ ಕಿಶೋರ್ ಹೇಳಿದ್ಯಾಕೆ?: ನಟನ ಟ್ವಿಟ್ಟರ್ ಖಾತೆ ಸಸ್ಪೆಂಡ್ - ETV Bharath Kannada news

ಕಿಶೋರ್ ಅವರ ಟ್ವಿಟ್ಟರ್ ಖಾತೆ ಸಸ್ಪೆಂಡೆಡ್ - ಕಾಂತಾರಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿದ್ದ ವಿಡಿಯೋ ಕುರಿತು ಕಿಶೋರ್​ ಸಾಮಾಜಿಕ ಚಾಲತಾಣದಲ್ಲಿ ಪೋಸ್ಟ್​ - ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ, ನಂಬಿದರೆ ಉಂಟು ನಂಬದಿದ್ದರೆ ಇಲ್ಲ ಎಂದಿರುವ ನಟ

actor-kishor-twitter-account-suspended
ಕಿಶೋರ್ ಅವರ ಟ್ವಿಟ್ಟರ್ ಖಾತೆ ಸಸ್ಪೆಂಡೆಡ್

By

Published : Jan 2, 2023, 8:16 PM IST

ಕನ್ನಡ ಚಿತ್ರರಂಗ ಅಲ್ಲದೇ ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಠಿಸಿದ ಸಿನಿಮಾ ಕಾಂತಾರ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಚಿತ್ರ ಸೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. ಈ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಮುರಳಿಧರ್ ಪಾತ್ರದಲ್ಲಿ ನಟ ಕಿಶೋರ್ ಅಬ್ಬರಿಸಿದ್ದರು. ಆದರೆ ಕಾಂತಾರ ಸಿನಿಮಾ ನೋಡಿ ಯುವಕನೊಬ್ಬ ರಕ್ತಕಾರಿ ಸತ್ತ ಎಂಬ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋ ಬಗ್ಗೆ ನಟ ಕಿಶೋರ್ ತಮ್ಮ ಅಭಿಪ್ರಾಯವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಂಬಿಕೆ ಇರಲಿ ಮೂಢ ನಂಬಿಕೆ ಬೇಡ. ಅದರ ಹೆಸರಿನಲ್ಲಿ ದ್ವೇಷವೂ ಬೇಡ ಎಂದು ಕಿಶೋರ್ ಹೇಳುವ ಮುಖಾಂತರ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಕ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಯಾವುದು ನಿಜ? ಯಾವುದು ಸುಳ್ಳು ಎನ್ನುವುದು ಕೂಡ ಕೆಲವೊಮ್ಮೆ ಗೊತ್ತಾಗುವುದಿಲ್ಲ ಅಂದಿದ್ದಾರೆ.

ನಂಬಿಕೆ ಇರಲಿ ಮೂಢ ನಂಬಿಕೆ ಬೇಡ ಅಂತಾ ನಟ ಕಿಶೋರ್ ಹೇಳಿದ್ಯಾಕೆ

ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ:ಕಾಂತಾರ ಸಿನಿಮಾಗೆ ಸಂಬಂಧಿಸಿದಂತೆ ಸಾಕಷ್ಟು ವಿಡಿಯೋಗಳು, ಸುದ್ದಿ ಹರಿದಾಡುತ್ತಲೇ ಇವೆ. ಕಾಂತಾರ ಚಿತ್ರದ ಕೊನೆ 15 ನಿಮಿಷ ಅದ್ಭುತ ಅನುಭವ ನೀಡಿತ್ತು. ಸಿನಿಮಾ ವೀಕ್ಷಿಸುವ ವೇಳೆ ಥಿಯೇಟರ್‌ನಲ್ಲಿ ಯುವಕನೊಬ್ಬ ಮೈ ಮೇಲೆ ದೈವ ಬಂದಂತೆ ವರ್ತಿಸಿದ್ದ ಘಟನೆ ಕೂಡ ವರದಿ ಆಗಿತ್ತು. ಇದೇ ರೀತಿ ವಾಟ್ಸಾಪ್‌ನಲ್ಲಿ ಹರಿದು ಬಂದ ವೈರಲ್ ವಿಡಿಯೋ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. 'ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೋ ವಾಟ್ಸಾಪಿನಲ್ಲಿ ಹರಿದು ಬಂತು. ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ' ಅಂದಿದ್ದಾರೆ.

ನಂಬಿದರೆ ಉಂಟು ನಂಬದಿದ್ದರೆ ಇಲ್ಲ:ಇನ್ನು,'ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೇ, ಸಿನಿಮಾವಾಗಲಿ ಪುರಾಣವಾಗಲಿ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ' ಎಂದು ಕಿಶೋರ್ ಬರೆದುಕೊಂಡಿದ್ದಾರೆ.

ಈ ಅನಿಸಿಕೆಯನ್ನು ಕಿಶೋರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ನಟ ಕಿಶೋರ್ ಅವರ ಟ್ವಿಟ್ಟರ್ ಖಾತೆ ಡಿಲೀಟ್ ಆಗಿತ್ತು. ಅವರ ಖಾತೆಯನ್ನು ಸರ್ಚ್ ಮಾಡಿದರೆ ಅಕೌಂಟ್ ಸಸ್ಪೆಂಡೆಡ್ ಎಂದು ತೋರಿಸುತ್ತಿದೆ. ಕಿಶೋರ್ ಟ್ವಿಟ್ಟರ್ ನಿಯಮ ಉಲ್ಲಂಘಿಸಿದ್ದಕ್ಕೆ ಖಾತೆ ರದ್ದು ಮಾಡಿರುವುದಾಗಿ ಟ್ವಿಟ್ಟರ್ ಹೇಳುತ್ತಿದೆ. ಸದ್ಯ ಫೇಸ್ ಬುಕ್​ನಲ್ಲಿ ಕಿಶೋರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ.

ಕಿಶೋರ್ ಅವರ ಟ್ವಿಟ್ಟರ್ ಖಾತೆ ಸಸ್ಪೆಂಡೆಡ್

ಇನ್ನು ಕನ್ನಡ ಅಲ್ಲದೇ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಬಹು ಬೇಡಿಕೆ ನಟನಾಗಿರುವ ಕಿಶೋರ್ ಸಾಮಾಜಿಕ ಚಿಂತನೆಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜೊತೆ ಅಭಿನಯಿಸಿ ಕಿಶೋರ್ ಸಿನಿಮಾ ಶೂಟಿಂಗ್ ಇಲ್ಲ ಅಂದ್ರೆ ತಮ್ಮ ತೋಟದಲ್ಲಿ ರೈತನಾಗಿ ಸಾಕಷ್ಟು ಬೆಳೆಗಳನ್ನು ಬೆಳೆಯುವ ಮೂಲಕ ವಿಭಿನ್ನವಾಗಿ ಗಮನ ಸೆಳೆಯುವ ಸರಳ ವ್ಯಕ್ತಿತ್ವದ ನಟ ಅಂದ್ರೆ ತಪ್ಪಿಲ್ಲ.

ಇದನ್ನೂ ಓದಿ:ಹೊಸ ಹುಮ್ಮಸ್ಸಿನಲ್ಲಿ ಕನ್ನಡ ಚಿತ್ರರಂಗ: 2023ರಲ್ಲಿ ಭರಪೂರ ಮನರಂಜನೆ ನೀಡುವ ಕನ್ನಡದ ಟಾಪ್​ ಸಿನಿಮಾಗಳ ಪಟ್ಟಿ

ABOUT THE AUTHOR

...view details